ರಾಜ್ಯದ ನಾಯಕರಿಗೆ ರಾಹುಲ್ ಖಡಕ್ ಸಂದೇಶ

ಮುಂಬರುವ ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಲು ರಾಹುಲ್ ಗಾಂಧಿ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಫೆ.15ರಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಪದಾಧಿಕಾರಿಗಳಿಗೆ ರಾಹುಲ್ ಇಂತಹ ಖಡಕ್ ಮಾತುಗಳನ್ನು ಹೇಳಿದ್ದಾರೆ.
ಕರ್ನಾಟಕದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆ ಗೆಲ್ಲಲು, ಪಕ್ಷ ಸಂಘಟಿಸಲು ಕೆಲವೊಂದು ನೂತನ ಸಲಹೆ ನೀಡಿರುವ ಯುವರಾಜ ರಾಹುಲ್ ಗಾಂಧಿ. ಪಕ್ಷದಲ್ಲಿನ ಗುಂಪುಗಾರಿಕೆ ಬಗೆಹರಿಸಲು ಗಮನ ಹರಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ಅಧಿಕಾರ ದೊರೆತರೆ ಪ್ರತಿಫಲ ಅನುಭವಿಸಿ. ಆದರೆ, ಗುಂಪುಗಾರಿಕೆ ಮಾಡಿಕೊಂಡು ರಾಜಕಾರಣ ಮಾಡಿದರೆ. ಪಕ್ಷದಿಂದ ಸೂಕ್ತ ಶಿಕ್ಷೆ ನೀಡಲಾಗುವುದು ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕವಾದ ನಂತರ ಎರಡನೇ ಬಾರಿ ವಿವಿಧ ರಾಜ್ಯದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ನೂತನ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಚುನಾವಣೆ ಘೋಷಣೆ ಆದ ಬಳಿಕವಷ್ಟೆ ರಾಹುಲ್ ಕಾರ್ಯತಂತ್ರ ಜಾರಿಯಾಗುತ್ತಾ? ಎಂದು ನೋಡಬಹುದಾಗಿದೆ.












Click it and Unblock the Notifications