ಕೊನೆಗೂ ಪುರಾತನ ಬೇಡಿಕೆ ಈಡೇರಿಸಿ ಶೆಟ್ಟರ್ ಕೃತಾರ್ಥ

ಈ ಒಂದು ಅರ್ಹ ಬೇಡಿಕೆಯನ್ನು ಮುಂದಿಟ್ಟುಕೊಂಡು ದಿನಗೂಲಿ ನೌಕರರು ಏನೆಲ್ಲಾ ಪಾಡುಪಟ್ಟರು. ಸುಪ್ರೀಂಕೋರ್ಟೇ ಇವರ ಬೇಡಿಕೆಯನ್ನು ಮನ್ನಿಸಿ ಅಂದರೂ ಅದ್ಯಾಕೋ ಹಿಂದಿನ ಸರಕಾರಗಳು ಮಿಸುಕಾಡಿರಲಿಲ್ಲ. ಕೊನೆಕೊನೆಗೆ ಖುದ್ದು ಮುಖ್ಯಮಂತ್ರಿಯನ್ನೇ 'ದಿನಗೂಲಿ ಮುಖ್ಯಮಂತ್ರಿ' ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಲೇವಡಿ ಮಾಡಿದರು. ಸಾಹೇಬರಿಗೆ ಆಗಲೂ ದಿನಗೂಲಿಗಳ ಗೋಳು ಅರ್ಥವಾಗಲಿಲ್ಲ.
ಆದರೆ ಜಗದೀಶ್ ಶೆಟ್ಟರ್ ಸಾಹೇಬರಿಗೆ ಇನ್ನೇನು ತಮ್ಮ ಸರಕಾರ ಗಂಟುಮೂಟೆ ಕಟ್ಟುವಾಗ ದಿನಗೂಲಿಗಳ ಜ್ಞಾಪಕ ಬಂದಂತಾಗಿ, ಬದುಕಿಕೋ ಹೋಗಿ ಎಂದಿದ್ದಾರೆ. 1984 ರ ಜುಲೈ 1ರಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ದಿನಗೂಲಿಗಳ ಸೇವೆಯನ್ನು ಕಾಯಂ ಮಾಡಲಾಗಿದೆ. ಇಷ್ಟು ದಿನ ಅಷ್ಟೊಂದು ಅಮಾನವೀಯವಾಗಿ ಇವರನ್ನು ನಡೆಸಿಕೊಂಡಿರುವುದಕ್ಕೆ ದಿನಗೂಲಿ ಎಂಬ ಪದವೇ ಸರಕಾರದ ಡಿಕ್ಷನರಿಯಿಂದ ತೊಲಗಲಿ.
ಸರಕಾರದ 24 ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತಿತರ ಸರಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಖಾಯಂಗೊಳಿಸುವ ಸಂಬಂಧ ವಿಧಾನಮಂಡಲದಲ್ಲಿ ಅಂಗೀಕಾರ ವಾಗಿರುವ ಮಸೂದೆಗೆ ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಅವರು ನಿನ್ನೆ ಅಂಕಿತ ಹಾಕಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಇವರು ದಿನಗೂಲಿಗಳಲ್ಲ, ಸರಕಾರಿ ನೌಕರರು. ಸರಕಾರಿ ನೌಕರರಿಗೆ ದೊರೆಯುವ ಎಲ್ಲಾ ಸವಲತ್ತುಗಳು ಇವರಿಗೆ ಸಲ್ಲಲಿವೆ.
ಸಂಜೆ ವೇಳೆಗೆ Karnataka Daily Wage Employees Welfare Billಗೆ ರಾಜ್ಯಪಾಲರ ಅಂಕಿತ ಬಿದ್ದಿದ್ದು, ರಾತ್ರಿ ವೇಳೆಗೆ ಇದು ರಾಜ್ಯಪತ್ರದ ಮೂಲಕ ಹೊರ ಬಂದಿದೆ. ಇದರಿಂದ ದಿನಗೂಲಿಗಳ ಹೋರಾಟದಲ್ಲಿ ಮಡಿದ (3,000 ಕ್ಕೂ ಹೆಚ್ಚು ಮಂದಿ) ಆತ್ಮಗಳಿಗೆ ಶಾಂತಿ ಸಿಕ್ಕಿರುತ್ತದೆ.
ಕುತೂಹಲದ ಸಂಗತಿಯೆಂದರೆ ಹಿಂದಿನ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಒಂದು ಬಾರಿಗೆ ಅನ್ವಯವಾಗುವಂತೆ ದಿನಗೂಲಿ ನೌಕರರನ್ನು ಖಾಯಂಗೊಳಿಸಬಹುದು ಎಂದು ಸರಕಾರಕ್ಕೆ ಶಿಫಾರಸು ಮಾಡಿತ್ತು. ಇದಾದ ನಂತರವೂ ಕಾನೂನು ಅವಾಂತರಗಳು ಸೃಷ್ಟಿಯಾಗುವೆಂದು ನೆಪ ಹೇಳಿ, ಇವರ ಸೇವೆಯನ್ನು ಖಾಯಂಗೊಳಿಸುವ ಕುರಿತು ತೀರ್ಮಾನವಾಗಿರಲಿಲ್ಲ.












Click it and Unblock the Notifications