ಹೋದಲ್ಲೆಲ್ಲ ನೀರು ಬಿಡುವ ಮಾತನ್ನಾಡುವ ಕುಮಾರಸ್ವಾಮಿ

ದಕ್ಷಿಣ ಕನ್ನಡದ ನೇತ್ರಾವತಿ ನದಿ ನೀರನ್ನು ಬಯಲುಸೀಮೆಗೆ ಹರಿಸಿಯೇ ಸಿದ್ಧ. ಮುಂದಿನ ಜೂನ್ ವೇಳೆಗೆ ಜೆಡಿಎಸ್ ಅಧಿಕಾರಕ್ಕೆ ಬಂದಿದ್ದೇ ಆದರೆ ಕೇವಲ 48 ಗಂಟೆಯಲ್ಲಿ ನೇತ್ರಾವತಿ ನೀರನ್ನು ಹರಿಸಿಬಿಡುವುದಾಗಿ ಇತ್ತೀಚೆಗೆ ಒಂದೇ ಸಮನೆ ಹೇಳುತ್ತಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಇದೀಗ ಚಾಮರಾಜನಗರ ಜಿಲ್ಲೆ ನಂಜನಗೂಡಿನ ನುಗು ಏತ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಭರಪೂರ ಭರವಸೆ ನೀಡಿದ್ದಾರೆ.
ತಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ... ಕಬಿನಿ ಭಾಗದ ಸಾವಿರಾರು ರೈತರ ಕನಸಾದ ಬೀರಾಲು ನುಗು ಏತ ನೀರಾವರಿ ಯೋಜನೆಯನ್ನು 20,000 ಎಕರೆ ಕೃಷಿ ನೀರಾವರಿಗಾಗಿ ಅನುಷ್ಠಾನಕ್ಕೆ ತರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಾಜಾ ಆಗಿ ಹೇಳಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ನಿನ್ನೆ ಶುಕ್ರವಾರ ಮಾತನಾಡಿದ ಕುಮಾರಸ್ವಾಮಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಮಾಜಿ ಸಚಿವ ಎಂ ಮಹದೇವ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ನುಗು ಏತ ನೀರಾವರಿ ಜಾರಿ ಮಾಡುತ್ತೇವೆ ಎಂದು ವಾಗ್ದಾನ ನೀಡಿದ್ದರು. ಆದರೆ ಬಿಜೆಪಿ ಸರಕಾರದ ಅಧಿಕಾರ ಇನ್ನೇನು ಕೊನೆಗೊಳ್ಳುತ್ತಿದೆ. ಆದರೂ ಈ ಯೋಜನೆ ಜಾರಿಯಾಗಿಲ್ಲ ಎಂದು ಕಿಡಿಕಾರಿದರು.
ಕಾವೇರಿ ವಿಚಾರದಲ್ಲಿ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕರ್ನಾಟಕದ ಜನತೆ ದಂಗೆ ಏಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.












Click it and Unblock the Notifications