ಶೋಭಾ ಎದುರು ಇಂಗು ತಿಂದ ಮಂಗನಾದ ರೇವಣ್ಣ

ಸಾವಿರಾರು ಕೋಟಿ ರೂ ಮೊತ್ತದ ಟೆಂಡರಿಗೆ ಜನವರಿ 21ರಂದು ಶೋಭಾ ಮೇಡಂ ತರಾತುರಿಯಾಗಿ ಸಹಿ ಹಾಕಿರುವುದನ್ನು ತಾವೇ ಖುದ್ದಾಗಿ ನೋಡಿದ್ದಂತೆ ಆರೋಪ ಹೊರೆಸಿದ್ದ ಜೆಡಿಎಸ್ ನಾಯಕ ರೇವಣ್ಣ ಈಗ ನಿಜಕ್ಕೂ ಪೇಚಿಗೆ ಸಿಲುಕಿದ್ದಾರೆ.
ಒಂದು ಕಡೆ ಖುದ್ದು ಸಿಎಂ ಶೆಟ್ಟರ್ ಅವರೇ ಶೋಭಾ ಮೇಲಿನ ಆರೋಪವನ್ನು ನಿರಾಕರಿಸಿದ್ದರೆ ಮತ್ತೊಂದೆಡೆ 'ನೀವು ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕೇಸು ಉಲ್ಟಾ ಆದರೆ ನೀವೇ ನಿವೃತ್ತರಾಗಿ ರೇವಣ್ಣಜೀ' ಎಂದು ಶೋಭಾ ಕರಂದ್ಲಾಜೆ ತುಂಟನಗೆ ಚೆಲ್ಲಿದ್ದಾರೆ.
ವಿಧಾನಸಭೆಯಲ್ಲಿ ಕಲಾಪದ ವೇಳೆ ರೇವಣ್ಣ ಮಾಡಿದ್ದ ಗಂಭೀರ ಆಪಾದನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 'ಹಿಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಟೆಂಡರ್ ಆಗಿದ್ದೇ ಕೇವಲ 64 ಕೋಟಿ ರೂ. ಕಾಮಗಾರಿಗೆ' ಎಂದು ಸ್ಪಷ್ಟನೆ ನೀಡಿದ್ದಾರೆ.
'ಜೆಡಿಎಸ್ ನಾಯಕ ರೇವಣ್ಣ ಅವರ ಆರೋಪ ಸರಿಯಲ್ಲ. ಸದನದಲ್ಲಿ ಆರೋಪ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು' ಎಂದೂ ಸಿಎಂ ಶೆಟ್ಟರ್ ತುಸು ಕೋಪ ವ್ಯಕ್ತಪಡಿಸಿದ್ದಾರೆ. ಗಮನಾರ್ಹವೆಂದರೆ ಆ ಸಂದರ್ಭದಲ್ಲಿ ರೇವಣ್ಣ ಸದನದಲ್ಲಿ ಇರಲಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಸದನಕ್ಕೆ ಗೈರು ಹಾಜರಾಗಿದ್ದ ರೇವಣ್ಣ ಸಾಹೇಬರು ಸಿಎಂ ಉತ್ತರ ಮುಗಿದ ನಂತರ ಸಂಜೆ ಸದನಕ್ಕೆ ಆಗಮಿಸಿದರು.
ರೇವಣ್ಣಗೆ ಶೋಭೆಯಲ್ಲ:
* ವಿದ್ಯುತ್ ಖರೀದಿ ಹಾಗೂ ಟೆಂಡರ್‌ನಲ್ಲಿ ಅವ್ಯವಹಾರದ ಬಗ್ಗೆ ಯಾವುದೇ ರೀತಿಯ ತನಿಖೆಗೂ ಸಿದ್ಧ.
* 3,600 ಕೋಟಿ ರೂ. ಗಳೋ ಅಥವಾ 3.60 ಕೋಟಿ ರೂ. ಗಳೋ ಎಂಬುದನ್ನು ರೇವಣ್ಣ ಖಚಿತಪಡಿಸಿಕೊಳ್ಳಲಿ. ಎಷ್ಟು ಸಂಖ್ಯೆಯ ಮುಂದೆ ಎಷ್ಟು ಸೊನ್ನೆಗಳಿವೆ ಎಂಬುದನ್ನು ರೇವಣ್ಣ ಅಭ್ಯಾಸ ಮಾಡಿಕೊಂಡು ಬಂದು ಆರೋಪ ಮಾಡಬೇಕು.
* ರೇವಣ್ಣ ಅವರು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ಪುತ್ರರು. ಅವರಂತಹ ವ್ಯಕ್ತಿಯ ಮಗನಾಗಿ ಇಂತಹ ಸತ್ಯಕ್ಕೆ ದೂರವಾಗಿರುವ ಆರೋಪ ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ.
* ಸಾರ್ವಜನಿಕ ಚರ್ಚೆಗೆ ನಾನು ಸಿದ್ಧ. ಸತ್ಯಕ್ಕೆ ದೂರವಾದ ಆರೋಪ ಮಾಡಿರುವ ರೇವಣ್ಣ ಅವರು ಸ್ಪಷ್ಟೀಕರಣ ನೀಡಬೇಕು ಎಂದು ಶೋಭಾ ಮೇಡಂ ಆಗ್ರಹಿಸಿದ್ದಾರೆ.












Click it and Unblock the Notifications