ಶೋಭಾ ಮೇಡಂ ನಿಜಕ್ಕೂ ಅಂಥ ಕೆಲ್ಸ ಮಾಡಿದ್ದಾರಾ?

ಈಗ್ಯಾಕಪ್ಪಾ ಈ ರಗಳೆ ಎಲ್ಲಾ ಅಂತ ಕೇಳಿದರೆ... ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರು ನಿನ್ನೆ ವಿಧಾನಸೌಧದಲ್ಲಿ ಶೋಭಾ ಮೇಡಂ ಅವರು ಸಾವಿರಾರು ಕೋಟಿ ರೂ ಅಕ್ರಮವೆಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಇಂಧನ ಖಾತೆ ಸಚಿವೆಯಾಗಿದ್ದಾಗ ಅಂತಿಮ ದಿನಗಳಲ್ಲಿ ಸಂಬಂಧಪಟ್ಟ ಹಿರಿ ಅಧಿಕಾರಿಗಳನ್ನೂ ದೂರವಿಟ್ಟು ತರಾತುರಿಯಲ್ಲಿ ಸಾವಿರಾರು ಕೋಟಿ ಮೊತ್ತದ (2,600 ಕೋಟಿ ರೂ) ಟೆಂಡರ್ ಪ್ರಕ್ರಿಯೆಗೆ ಒಪ್ಪಿಗೆ ನೀಡಿದ್ದಾರೆ.
ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ರೇವಣ್ಣ ಸದನದ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರೇವಣ್ಣ, ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ರಾಜಿನಾಮೆ ನೀಡಿದ್ದು ಕಳೆದ ಜನವರಿ 23ರಂದು. ಅದಕ್ಕೂ ಮುನ್ನ ಹಾಲಿ ಪ್ರಕರಣಕ್ಕೆ ಸಂಬಂಧಪಟ್ಟ ಟೆಂಡರ್ ಅನ್ನು ಜ. 19ರಂದು ತೆರೆದಿದ್ದಾರೆ. ಅದಾಗುತ್ತಿದ್ದಂತೆ 21ರಂದು ತರಾತುರಿಯಾಗಿ ಕೆಪಿಟಿಸಿಎಲ್ ಆಡಳಿತ ಮಂಡಳಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ 'ಹೆಚ್ಚಿನ ಸಾಮರ್ಥ್ಯದ ಲೈನ್ ಗಳನ್ನು ಅಳವಡಿಸುವ ಕಾಮಗಾರಿ ಮತ್ತು ವಿದ್ಯುತ್ ಉಪ ಕೇಂದ್ರಗಳನ್ನು ನಿರ್ಮಿಸುವ ಕಾಮಗಾರಿಗಳ ಗುತ್ತಿಗೆ ಟೆಂಡರ್' ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಮತ್ತು ಅನುಮಾನಾಸ್ಪದವಾಗಿ ಈ ಟೆಂಡರ್ ಹೈದರಾಬಾದ್ ಮೂಲದ ಜಿವಿಪಿಆರ್ ಕಂಪನಿಯ ಪಾಲಾಗಿದೆ ಎಂಬುದು ರೇವಣ್ಣ ಅವರು ನೀಡುವ ವಿವರಣೆ.
ಅಧಿಕಾರಿಗಳಿಲ್ಲದೆ ಟೆಂಡರ್ ಅಂತಿಮ!: ಆದರೆ, ಆಡಳಿತ ಮಂಡಳಿಯ ನಿರ್ದೇಶಕರೂ ಆಗಿರುವ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌ವಿ ನಾಗರಾಜು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂಎನ್ ವಿದ್ಯಾಶಂಕರ್, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂಆರ್ ಕಾಂಬ್ಳೆ, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಈ ಸಭೆಗೆ ಗೈರು ಹಾಜರಾಗಿದ್ದರು.
ಉದ್ದೇಶಪೂರ್ವಕವಾಗಿಯೇ ಈ ಹಿರಿಯ ಅಧಿಕಾರಿಗಳನ್ನು ದೂರವಿಟ್ಟು, ತಮಗೆ ಬೇಕಾದ ಕೆಲವೇ ಕೆಲವು ನಿರ್ದೇಶಕರನ್ನು ಕರೆಯಿಸಿಕೊಂಡು, ತಮಗೆ ಅನುಕೂಲವಾಗುವಂತೆ ಕರಂದ್ಲಾಜೆ ತೀರ್ಮಾನ ಕೈಗೊಂಡಿದ್ದಾರೆ ಎಂಬುದು ರೇವಣ್ಣ ಅವರ ಆಪಾದನೆ. ಮಾಜಿ ಇಂಧನ ಸಚಿವೆ ಶೋಭಾ ಅವರು ಪ್ರತಿಕ್ರಿಯೆಗೆ ಇನ್ನೂ ಸಿಕ್ಕಿಲ್ಲ.












Click it and Unblock the Notifications