ರಾಮುಲು ಕಾಂಗ್ರೆಸಿಗೆ ಮಣೆ: ಸಚಿವ ಆನಂದ್ ರಾಜೀನಾಮೆ?

ನಿನ್ನೆಯ ರಾಯಚೂರು ಸಾತ್ ಮೈಲ್ ಸಮಾವೇಶದಲ್ಲಿ ಸೋಮಶೇಖರ ರೆಡ್ಡಿ ಮತ್ತು ತಂಡ ತೆಗಳಿದ್ದರೂ ಮತ್ತು ಅದಕ್ಕೂ ಮುನ್ನ ತಾನು ರೈತ ಎಂಬುದನ್ನು ಬಿಂಬಿಸಿಕೊಳ್ಳಲು ಸರಕಾರಕ್ಕೆ ಸಡ್ಡು ಹೊಡೆದು ಹಾಲಿನ ದರವೇರಿಸಿದ ಕೆಎಂಎಫ್ ಸೋಮ ರೆಡ್ಡಿ ವಿರುದ್ಧ ಬಿಜೆಪಿ ಚಕಾರವೆತ್ತಿಲ್ಲ.
ಮುಂದೆ ಇಲ್ಲಿ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುತ್ತಿದ್ದರೂ ಅಲ್ಲಿ ಚಂಚಲಗೂಡ ಜೈಲಿನ ಹೆಡ್ಡಾಫೀಸಿನಲ್ಲಿ ಜನಾ ರೆಡ್ಡಿ ತಮ್ಮತ್ತ ಕೃಪಾಕಟಾಕ್ಷ ಬೀರಬಹುದು ಎಂಬುದು ಬಿಜೆಪಿಯ ದೂರಾಲೋಚನೆಯಾಗಿದೆ.
ಈ ಮಧ್ಯೆ, ಬಳ್ಳಾರಿ ಜಿಲ್ಲೆಯ ಎಂಪಿಎಂಸಿಗಳ ಸದಸ್ಯರ ನಾಮನಿರ್ದೇಶನದಲ್ಲಿ ಬಿಎಸ್‌ಆರ್ ಕಾಂಗ್ರೆಸ್ಸಿಗೇ ಮಣೆ ಹಾಕಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಿಜೆಪಿ ನಾಯಕರ ಈ ಧೋರಣೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಪ್ರತಿಯೊಂದು ಪ್ರಮುಖ ನಿರ್ಧಾರಗಳಲ್ಲೂ ಬಿಎಸ್‌ಆರ್ ಕಾಂಗ್ರೆಸ್ ನಾಯಕರ ಮಾತಿಗೆ ಬೆಲೆ ಸಿಗುತ್ತಿದೆ. ಹಾಗಾಗಿ ತಾವು ಈ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂದು ಆನಂದ್ ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿಗರ ರಾಜೀನಾಮೆ ಸಂದರ್ಭ ಶ್ರೀರಾಮುಲು ಜತೆ ಮಾತುಕತೆ ನಡೆಸಿದ್ದ ಬಿಜೆಪಿ ನಾಯಕರು ಬಿಎಸ್‌ಆರ್ ಕಾಂಗ್ರೆಸ್ ಜತೆ ಗಾಢವಾಗಿ ಗುರುತಿಸಿಕೊಂಡಿರುವ ಬಿಜೆಪಿಯ 4 ಶಾಸಕರ ಸಂಪೂರ್ಣ ಸಹಕಾರ ಹಾಗೂ ಬೆಂಬಲ ಕೋರಿದ್ದು, ಅದಕ್ಕೆ ಪ್ರತಿಯಾಗಿ ಜಿಲ್ಲೆಯಲ್ಲಿ ಅವರು ಹೇಳಿದ ಕೆಲಸಗಳನ್ನು ಮಾಡಿಸಿಕೊಡುವುದಾಗಿಯೂ ಬಿಜೆಪಿ ಭರವಸೆ ನೀಡಿತ್ತು ಎನ್ನಲಾಗಿದೆ.
ಇದು ಇತ್ತೀಚೆಗೆ ಎಪಿಎಂಸಿಗಳ ಚುನಾವಣೆ ಸಂದರ್ಭ ಅನುಭವಕ್ಕೆ ಬರುತ್ತಿದೆ. ಬಿಜೆಪಿ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡುವ ಬದಲು ಬಿಎಸ್‌ಆರ್ ಕಾಂಗ್ರೆಸ್ ಬೆಂಬಲಿತರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದೂ ಅಲ್ಲದೆ ಹಲವಾರು ಪ್ರಮುಖ ನಿರ್ಧಾರಗಳನ್ನು ಬಿಎಸ್‌ಆರ್ ಕಾಂಗ್ರೆಸ್ ಮುಖಂಡರ ಆಣತಿಯಂತೆ ಮಾಡಲಾಗುತ್ತಿದೆ. ಹೀಗಾದರೆ ತಾವೇಕೆ ಸಚಿವರಾಗಿ ಮುಂದುವರಿಯಬೇಕು? ಎಂದು ಆನಂದ್ ಸಿಂಗ್ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications