ಗ್ಯಾಸ್ ಕನೆಕ್ಷನ್ ಗೆ ಆಧಾರ್ ಕಡ್ಡಾಯವಲ್ಲ

ಆಧಾರ್ ಕಾರ್ಡ್ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಟೋಕನ್ ವ್ಯವಸ್ಥೆ ಜಾರಿಗೆ ತರಲಾಗುವುದು. ಆಧಾರ್ ಕಾರ್ಡ್ ಆನ್ ಲೈನ್ ಮೂಲಕ ಲಭ್ಯವಿರುವುದಿಲ್ಲ ಎಂದು ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.
ಸೋಮವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ನೆ.ಲ. ನರೇಂದ್ರಬಾಬು, ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಪಡೆಯಲು ಜನರು ತುಂಬಾ ಪರದಾಡುತ್ತಿರುವುದನ್ನು ಸದನದ ಗಮನ ಸೆಳೆದರು. ಜನರು ತಮ್ಮ ಆಧಾರ್ ಕಾರ್ಡ್ ಪಡೆಯಲು ಬೆಳಗಿನ ಜಾವ 4
ಗಂಟೆಗೇ ಕೇಂದ್ರದ ಮುಂದೆ ಕ್ಯೂ ನಿಲ್ಲಬೇಕಾಗುತ್ತದೆ. ಇದರಿಂದ ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಗ್ಯಾಸ್ ಕಂಪನಿಗಳು ಆಧಾರ್ ಕಾರ್ಡ್ ಇಲ್ಲದಿದ್ದರೆ ಗ್ಯಾಸ್ ನೀಡುವುದಿಲ್ಲ ವೆಂದು ಸುದ್ದಿ ಹರಡಿಸುತ್ತಿವೆ. ಇದಕ್ಕಾಗಿ ಜನರು ಆಧಾರ್ ಕೇಂದ್ರಗಳಿಗೆ ಮುಗಿಬೀಳುವಂತಾಗಿದೆ. ಹಾಗಾಗಿ ತಕ್ಷಣವೇ ನಗರದಲ್ಲಿ ಆಧಾರ್ ಕೇಂದ್ರಗಳನ್ನು ಹೆಚ್ಚಿಸಬೇಕು, ಜತೆಗೆ ಮೊಬೈಲ್ ಸೇವೆ ಕೂಡ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಸುರೇಶ್‌ಕುಮಾರ್, ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಪಡೆಯಲು ಆಗುತ್ತಿರುವ ತೊಂದರೆ ತಮ್ಮ ಗಮನಕ್ಕೂ ಬಂದಿದೆ. ಇದನ್ನು ಪರಿಹರಿಸುವ ಯತ್ನ ನಡೆಯುತ್ತಿದೆ. ಪ್ರಮುಖವಾಗಿ ಗ್ಯಾಸ್ ಕಂಪನಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಬೆಂಗಳೂರಿಗರಿಗೆ ಇಲ್ಲ.
ಮೈಸೂರು, ಧಾರವಾಡ ಮತ್ತು ಮಂಡ್ಯ ಈ ಮೂರು ಜಿಲ್ಲೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದರು. ವಿಶೇಷವಾಗಿ ಬೆಂಗಳೂರಿನಲ್ಲಿ ಜನರು ಬೆಳಗ್ಗೆಯೇ ಕೇಂದ್ರದ ಮುಂದೆ ನಿಲ್ಲುವುದನ್ನು ತಪ್ಪಿಸಲು ಟೋಕನ್ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಮುಂಚೆಯೇ ತಿಳಿಸಿ ಆಧಾರ ಕಾರ್ಡ್ ಪಡೆಯಲು ಅನುಕೂಲ ಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ತಿಳಿಸಿದರು.












Click it and Unblock the Notifications