ಬಜೆಟ್ : ಗಾಂಭೀರ್ಯದ ನಡುವೆ ಸ್ವಲ್ಪ ಸ್ವಾರಸ್ಯ!

ಶಂಕರಲಿಂಗೇ ಗೌಡರ ಪ್ರತಿಭಟನೆ : ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರ ವಿರುದ್ಧ ಹರಿಹಾಯುತ್ತಲೇ ಇರುತ್ತಿದ್ದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ವಿಶಿಷ್ಟ ರೀತಿಯಲ್ಲಿ ಸದನಕ್ಕೆ ಎಂಟ್ರಿ ಕೊಟ್ಟು, ವಿಭಿನ್ನ ರೀತಿಯಲ್ಲಿ ಸರಕಾರದ ವಿರುದ್ಧವೇ ಪ್ರತಿಭಟನೆ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬಾರದೆಂದು ಆಗ್ರಹಿಸಿ ನೀರು ತುಂಬಿದ ಬೆಳ್ಳಿ ಚಂಬುವನ್ನು ತಲೆಯ ಮೇಲೆ ಹೊತ್ತುಬಂದ 'ರೆಬೆಲ್ ಸ್ಟಾರ್' ಶಂಕರಲಿಂಗೇ ಗೌಡ, ಬಜೆಟ್ ಮಂಡನೆ ಆರಂಭವಾಗುವ ಮೊದಲು ಬಾಟಲಿಯಲ್ಲಿದ್ದ ನೀರನ್ನು ತಲೆಯ ಮೇಲೆ ಸುರಿದುಕೊಂಡು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ಸಲ್ಲಿಸಿದರು.
ಚಾಮರಾಜ ಕ್ಷೇತ್ರದಿಂದ ಸತತವಾಗಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೌಡರು, 2002ರಲ್ಲಿ 'ಭಾರತದ ಅತ್ಯುತ್ತಮ ನಾಗರಿಕ' ಮತ್ತು 2005ರಲ್ಲಿ 'ಕರ್ನಾಟಕದ ಮಕ್ಕಳ ಸ್ನೇಹಿ ಎಂಎಲ್ಎ' ಎಂಬ ಗೌರವಕ್ಕೆ ಪಾತ್ರರಾಗಿರುವ ಗೌಡರು ಬಾಟಲಿ ನೀರನ್ನು ತಲೆ ಮೇಲೆ ಸುರಿದುಕೊಳ್ಳುತ್ತಿದ್ದಂತೆ ಇಡೀ ಸದನ ಗಹಗಹಿಸಿ ನಗಲು ಆರಂಭಿಸಿತು.
ಕೊನೆಗೆ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಸ್ವತಃ ಬಂದು ಶಂಕರಲಿಂಗೇ ಗೌಡರನ್ನು ಮನವೊಲಿಸಿ ಎಳೆದುಕೊಂಡು ಹೋದರು. ಹೋಗುವ ಮುನ್ನ ಬಾಟಲಿಯಲ್ಲಿ ಇದ್ದದ್ದು ನೀರೋ, ಸೀಮೆ ಎಣ್ಣೆಯೋ ಎಂಬುದನ್ನು ಮೂಸಿ ನೋಡಲು ಅಶೋಕ್ ಮರೆಯಲಿಲ್ಲ.
ಸಿಹಿ ತಿನ್ನಿಸಿದ ರೇಣುಕಾ : ಕೆಲ ದಿನಗಳ ಹಿಂದೆ ಈಶ್ವರಪ್ಪ ಅವರನ್ನು ಶಿವಮೊಗ್ಗದಲ್ಲಿ ಗುಟ್ಟಾಗಿ ಭೇಟಿಯಾಗಿದ್ದರ ಪ್ರಭಾವವೋ ಏನೋ, ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಜಗದೀಶ್ ಶೆಟ್ಟರ್ ಅವರಿಗೆ, ಬಜೆಟ್ ಮಂಡನೆಯ ನಂತರ ಸಿಹಿ ತಿನ್ನಿಸಿ ಅವರ ವಿರೋಧಿಗಳು ಮತ್ತು ಬೆಂಬಲಿಗರು ಕೂಡ ಅಚ್ಚರಿ ಪಟ್ಟುಕೊಳ್ಳುವಂತೆ ಮಾಡಿದರು.
ಶೆಟ್ಟರ್ ಅವರು ವಿರೋಧಿಗಳಿಂದ ಟೀಕೆಗೆ ಗುರಿಯಾದ ಸುದೀರ್ಘವಾದ ಬಜೆಟ್ ಮಂಡಿಸಿ ಮುಗಿಸುತ್ತಿದ್ದಂತೆ ರೇಣುಕಾಚಾರ್ಯ ಅವರು ಚಂಗನೆ ಎಗರಿ ಬಂದು ಸ್ವೀಟ್ ಡಬ್ಬ ತೆಗೆದು ಶೆಟ್ಟರ್ ಅವರ ಬಾಯಲ್ಲಿ ಸಿಹಿ ತುರುಕೇ ಬಿಟ್ಟರು. ರೇಣುಕಾಚಾರ್ಯ ಅವರ ಜೊತೆ, ಯಡಿಯೂರಪ್ಪ ಅವರ ಬಣದೊಡನೆ ಗುರುತಿಸಿಕೊಂಡಿದ್ದ ಮುರುಗೇಶ್ ನಿರಾಣಿ ಅವರು ಕೂಡ ಕಾಣಿಸಿಕೊಂಡಿರುವುದು ಯಡಿಯೂರಪ್ಪ ಬಳಗಕ್ಕೆ ನುಂಗಲಾಗದ ತುಪ್ಪವಾಗಿದೆ.
ರೇವಣ್ಣ ಭರ್ತಿ ಗುರುಕಿ : ನಾಲ್ಕು ಗಂಟೆ ಸತತವಾಗಿ ಬಜೆಟ್ ಓದುತ್ತಿದ್ದರೆ ಯಾರಿಗಾದರೂ ಆಕಳಿಕೆ ಬರದೆ ಇರುತ್ತದಾ? ಹಲವರು ಬಾಯಿಮುಂದೆ ಚಿಟಿಕೆ ಹೊಡೆಯುತ್ತ ಕಷ್ಟಪಟ್ಟು ಎಚ್ಚರವಾಗಿದ್ದರೆ, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರು ಭರ್ತಿ ಒಂದು ಜೋಂಪು ಎಳೆದರು. ನಂತರ ಬಜೆಟ್ ಬಗ್ಗೆ ಪ್ರತಿಕ್ರಿಯೆ ಕೇಳುತ್ತಿದ್ದಂತೆ, ಬಜೆಟ್ ನಿರಾಶಾದಾಯಕವಾಗಿದೆ, ರೈತರಿಗೆ ವಿರೋಧವಾಗಿದೆ, ಜನರಿಗೆ ಬರೀ ಆಸೆ ತೋರಿಸಲಾಗಿದೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.
ಮಳೆ ನೀರಿನ ಧಾಂತನಕಧೀಂ : ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಗದೀಶ್ ಶೆಟ್ಟರ್ ಅವರು ಭರವಸೆಗಳ ಮಳೆ ಸುರಿಸಿ ಮುಗಿಸುತ್ತಿದ್ದಂತೆ, ಬೆಂಗಳೂರಿನಲ್ಲಿ ಇಡೀ ದಿನ ಮೋಡಾಚ್ಛಾದಿತವಾಗಿದ್ದ ಆಗಸ ಕೆಲ ಹನಿಗಳನ್ನು ಸುರಿಸಿ ಬೆಂದು ಕಾದಿದ್ದ ನೆಲಕ್ಕೆ ತಂಪೆರೆಯಿತು. ಇದು ಕಣ್ಣೀರಾ ಪನ್ನೀರಾ ಎಂಬುದನ್ನು ಜನರೇ ನಿರ್ಧರಿಸಬೇಕು.












Click it and Unblock the Notifications