ಗುತ್ತಿಗೆದಾರನ ಕಾಟ ಕುತ್ತಿಗೆ ಬಂದಾಗ ನೇಣೆ ಗತಿ

ಚಿಕ್ಕಬಳ್ಳಾಪುರದ ಬೆಸ್ಕಾಂನ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನಿತಾ ಎಂಬುವರೇ ಮೃತಪಟ್ಟ ದುರ್ದೈವಿ. ಬೆಂಗಳೂರಿನ ಸೋಮೇಶ್ವರನಗರದಲ್ಲಿ ವಾಸವಾಗಿದ್ದ 29 ವರ್ಷದ ಸುನಿತಾ ಅವರು ವಾಸವಾಗಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಮೇಲೆ ತೀವ್ರವಾಗಿ ಮಾನಸಿಕ ವೇದನೆ ಅನುಭವಿಸಿದ್ದರು.
ಮನೆಯಲ್ಲಿ ಸುನಿತಾ ತಾಯಿ ಅವರು ಮಲಗಿದ್ದ ಮೇಲೆ ತನ್ನ ಕೋಣೆಗೆ ತೆರಳಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಿಇ ಪದವಿಧರೆಯಾಗಿದ್ದ ಸುನಿತಾ ಅವರಿಗೆ ಉತ್ತಮ ಉದ್ಯೋಗ ಇತ್ತು. ಆದರೆ, ಕಾರ್ಯ ನಿರ್ವಹಿಸುವ ವಾತಾವರಣ ಅನುಕೂಲಕರವಾಗಿರಲಿಲ್ಲ.
ಓದು ಮುಗಿಯುತ್ತಿದ್ದಂತೆ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಉದ್ಯೋಗಿ ಸಿಕ್ಕಿತ್ತು. ಬೆಸ್ಕಾಂ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಳೆದ 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಇತ್ತೀಚೆಗೆ ಸುನಿತಾಳಿಗೆ ಗುತ್ತಿಗೆದಾರನೊಬ್ಬ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಸುನಿತಾ ಅವರ ಶವದ ಬಳಿ ಸಿಕ್ಕಿರುವ ಸೂಸೈಡ್ ನೋಟ್ ನಲ್ಲಿ ಕೂಡಾ ಗುತ್ತಿಗೆದಾರನ ಕಿರುಕುಳವೇ ಕಾರಣ ಎಂದು ಬರೆಯಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸುನಿತಾ ಅವರ ತಾಯಿ ಪೊಲೀಸರ ಮೊರೆ ಹೊಕ್ಕಿದ್ದಾರೆ. ಬೆಸ್ಕಾಂ ಕಚೇರಿಯ ಹಿರಿಯ ಅಧಿಕಾರಿಗಳ ಪ್ರಕಾರ, ಸುನಿತಾ ಉತ್ತಮ ಉದ್ಯೋಗಿಯಾಗಿದ್ದರು. ಕಚೇರಿಯಲ್ಲಿ ಗುತ್ತಿಗೆದಾರರ ಕಿರುಕುಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಚೇರಿ ಹೊರಗೆ ಏನಾದರೂ ನಡೆದಿದ್ದರೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ.
ಗುತ್ತಿಗೆದಾರ ತನ್ನ ಕಾರ್ಯ ಸಾಧನೆಗಾಗಿ ಸುನಿತಾ ಮೇಲೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ಆದರೆ, ಕರ್ತವ್ಯ ನಿಷ್ಠೆ ಮರೆಯದ ಸುನಿತಾ, ಗುತ್ತಿಗೆದಾರನ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಇದರಿಂದ ಕೋಪಗೊಂಡ ಗುತ್ತಿಗೆದಾರ ಹಲವು ಬಾರಿ ಬೆದರಿಕೆ ಕರೆ ಮಾಡಿದ್ದ ಎನ್ನಲಾಗಿದೆ. ಗುತ್ತಿಗೆದಾರನ ವಿಚಾರಣೆ ನಡೆಸಿದರೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications