ಪಿತೃ ಸಮಾನ ಬಿಎಸ್ವೈ ಬಗ್ಗೆ ಸೋಮಣ್ಣ ಹೇಳಿದ್ದೇನು?
ಆಡಳಿತ ಯಂತ್ರ ಯಾವ ಪಕ್ಷದ ಕೈಯಲ್ಲಿರುತ್ತೋ ಆ ಪಕ್ಷದ ಮೇಲೆ ನಿಷ್ಠೆ ತೋರುವ ಖ್ಯಾತಿಯ ವಸತಿ ಸಚಿವ ವಿ ಸೋಮಣ್ಣ ಮೂರುವರೆ ವರ್ಷಗಳ ಹಿಂದೆ ಬಿಜೆಪಿಗೆ ಸೇರಿ ತಪ್ಪು ರಾಜಕೀಯ ನಡೆಯಿಟ್ಟೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರಂತೆ.
ಪಬ್ಲಿಕ್ ಟಿವಿಯ ಚೊಚ್ಚಲ 'ಹಾಟ್ ಸೀಟ್' ಕಾರ್ಯಕ್ರಮದಲ್ಲಿ (02.02.2013)ಎಚ್ ಆರ್ ರಂಗನಾಥ್ ಜೊತೆ ಮಾತನಾಡುತ್ತಿದ್ದ ಸೋಮಣ್ಣ ಕಾರ್ಯಕ್ರಮದ ಉದ್ದಕ್ಕೂ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವ ಹಾಗೆ ಯಡಿಯೂರಪ್ಪ, ಅನಂತ್ ಕುಮಾರ್ ಮತ್ತು ದೇವೇಗೌಡ ಅವರನ್ನು ಒಂದು ಕಡೆ ಹೊಗಳಿ ಮತ್ತೆ ಇನ್ನೊಂದು ಕಡೆ ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಗೆಲ್ಲಲು ನಾನೂ ಪ್ರಮುಖ ಕಾರಣ. ಅವರ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ರಾಜಕೀಯ ಜೀವನದಲ್ಲಿ ಎಂದೂ ಸೋತವನಲ್ಲ ನಾನು. ಗೋವಿಂದರಾಜ ನಗರ ಕ್ಷೇತ್ರದ ಮರು ಚುನಾವಣೆಯಲ್ಲಿ ಗೆಲ್ಲಲು ನನಗೆ ಮೂರು ಸಾವಿರ ಮತದ ಅವಶ್ಯಕತೆಯಿತ್ತು.
ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಬಳಿ ಬಿಜೆಪಿ ಕಾರ್ಯಕರ್ತರಿಗೆ ಈ ಬಗ್ಗೆ ಎಚ್ಚರಿಸಲು ಪರಿಪರಿಯಾಗಿ ಕೇಳಿಕೊಂಡೆ. ಆದರೆ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಅವರ ಅತಿಯಾದ ಆತ್ಮವಿಶ್ವಾಸ ನನ್ನ ಸೋಲಿಗೆ ಕಾರಣವಾಯಿತು. ಈಗಿನ ರಾಜಕಾರಣ ನನಗೆ ಬೇಸರ ತರಿಸಿದೆ.ಇನ್ನು ಇಪ್ಪತ್ತು ದಿನದೊಳಗೆ ನನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಸೋಮಣ್ಣ ದುಖಃದಿಂದ ಮಾತನ್ನಾಡಿದ್ದಾರೆ.
ಸಂದರ್ಶನದಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್ ಬಗ್ಗೆ ಮತ್ತು ಕೆಜೆಪಿಗೆ ಅಥವಾ ಕಾಂಗ್ರೆಸ್ಸಿಗೆ ಸೇರುತ್ತೀರಾ ಎನ್ನುವ ಪ್ರಶ್ನೆಗೆ ಭಾವೋದ್ವೇಗಕ್ಕೆ ಒಳಗಾಗಿ ಸೋಮಣ್ಣ ಹೇಳಿದ್ದೇನು.. ಮುಂದಿನ ಸ್ಲೈಡಿನಲ್ಲಿ..

ಬಿಎಸ್ವೈ ನನಗೆ ತಂದೆಗೆ ಸಮಾನ
ಯಡಿಯೂರಪ್ಪ ನನಗೆ ತಂದೆಯ ಸಮಾನ. ನನ್ನಂತೆ ಬಹಳ ಕಾರ್ಯಕರ್ತರಿಗೆ ಅವರು ದಾರಿದೀಪವಾಗಿದ್ದಾರೆ. ಹೇಳಿಕೆಯ ಮಾತನ್ನು ಕೇಳುವುದೇ ಯಡಿಯೂರಪ್ಪನವರ ವೀಕ್ ಪಾಯಿಂಟ್. ಅವರ ದೂರದೃಷ್ಟಿ, ನಡೆದು ಬಂದ ರೀತಿಯ ನನ್ನ ಗೌರವವಿದೆ. ನನ್ನನ್ನು ಬಿಜೆಪಿಗೆ ಕರೆತಂದದ್ದೂ ಅವರೇ ನಂತರ ಮೂಲೆಗುಂಪು ಮಾಡಿದವರೂ ಅವರೇ..

ಕೆಜೆಪಿಗೆ ಸೇರುವ ಬಗ್ಗೆ
ಸದ್ಯದ ಪರಿಸ್ಥಿತಿಯಲ್ಲಿ ಹೇಳುವುದಾದರೆ ಕೆಜೆಪಿಗೆ ಖಂಡಿತಾ ಸೇರುವುದಿಲ್ಲ. ಪಕ್ಷದಲ್ಲಿ ಯಡಿಯೂರಪ್ಪನವರಿಗೆ ಕಿವಿ ಊದುವವರು ತುಂಬಾ ಜನರಿದ್ದಾರೆ. ಅಂಥವರ ಜೊತೆ ರಾಜಕೀಯ ಮಾಡಲು ನನಗೆ ಶಕ್ತಿಯಿಲ್ಲ.

ಪುಟ್ಟಸ್ವಾಮಿಗೆ ಡಾಕ್ಟರೇಟ್
ಯಡಿಯೂರಪ್ಪ ಆಪ್ತ ಪುಟ್ಟಸ್ವಾಮಿಗೆ ಚಾಡಿ ಹೇಳುವುದರಲ್ಲಿ ಡಾಕ್ಟರೇಟ್ ಕೊಡಬೇಕು. ಎಸ್ ಎಂ ಕೃಷ್ಣ ಅವರಿಂದ ಹಿಡಿದು ಯಡಿಯೂರಪ್ಪ ಅಧಿಕಾರದವರೆಗೆ ಇವರ ಕೆಲಸವೇನೆಂದರೆ ಕಿವಿ ಊದಿ ತನ್ನ ಬೇಳೆ ಬೇಯಿಸಿಕೊಳ್ಳುವುದು. ಯಡಿಯೂರಪ್ಪ ಆದಷ್ಟು ಇವರನ್ನು ದೂರವಿಟ್ಟರೆ ಅವರಿಗೇ ಒಳ್ಳೆದು.

ಬಿಎಸ್ವೈ, ಅನಂತ್ ಅನ್ಯೋನ್ಯವಾಗಿದ್ದರು
ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಪಕ್ಷ ಅಧಿಕಾರಕ್ಕೆ ಬಂದ ಹೊಸತಿನಲ್ಲಿ ಬಹಳ ಅನ್ಯೋನ್ಯವಾಗಿದ್ದರು. ಅವರಿಬ್ಬರ ನಡುವೆ ವೈಮನಸ್ಸು ಬರಲು ಕಾರಣವೇನೆಂದು ನನಗೆ ತಿಳಿದಿಲ್ಲ. ಪ್ರಾಯಶ: ಬಿಜೆಪಿಯಲ್ಲಿ ಒಡಕು ಮೂಡಲು ಅನಂತ್ ಕುಮಾರ್ ಮೂಲ ಕಾರಣ.

ನನ್ನ ಮುಂದಿನ ನಡೆ ಇಪ್ಪತ್ತು ದಿನದಲ್ಲಿ
ಜಗದೀಶ್ ಶೆಟ್ಟರ್ ನಾನು ಕಂಡ ಉತ್ತಮ ರಾಜಕಾರಿಣಿ. ರಾಜಕೀಯ ನನಗೆ ಬೇಸರ ತರಿಸಿದೆ. ಕಾಂಗ್ರೆಸ್ ಸೇರುತ್ತೇನೋ, ಬಿಜೆಪಿ ಬಿಡುತ್ತೇನೋ, ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೋ ಎನ್ನುವುದರ ಬಗ್ಗೆ ಇನ್ನು ಇಪ್ಪತ್ತು ದಿನದಲ್ಲಿ ನಿರ್ಧರಿಸುತ್ತೇನೆ.












Click it and Unblock the Notifications