ಕುಂಭಮೇಳಕ್ಕೆ ನಿತ್ಯಾನಂದ ; ಭಕ್ತಾದಿಗಳ ಭಾರೀ ವಿರೋಧ

ಮೂರು ತಿಂಗಳು ಭೂಗತರಾಗಿದ್ದು ಇಂದು ಕಾಣಿಸಿಕೊಂಡಿರುವ 'ಡೀಲ್' ಸ್ವಾಮಿ ಋಷಿಕುಮಾರ ಕಡೂರಿನ ಬಳಿ 'ಲೋಕ ಕಲ್ಯಾಣ'ಕ್ಕಾಗಿ ಹೋಮ ಹವನ ನಡೆಸುತ್ತಿದ್ದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಾವಿಸ್ವಾಮಿ ನಿತ್ಯಾನಂದ ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಅಲಹಾಬಾದ್‌ನ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ತ್ರಿವೇಣಿ ಸಂಗಮದ ಜಾಗದಲ್ಲಿ ನಿತ್ಯಾನಂದನ ಕಟ್ಟಾ ಭಕ್ತರು ದೊಡ್ಡ ಪೆಂಡಾಲನ್ನು ಹಾಕಿದ್ದು, ಅದರಲ್ಲಿ ನಿತ್ಯಾನಂದನ 8 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಷ್ಟು ಮಾತ್ರವಲ್ಲ, ಆ ಮೂರ್ತಿಗೆ ಹಾರ ಹಾಕಿ ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿದೆ.
ಕೆರಳಿದ ಭಕ್ತಾದಿಗಳು : ಫೆ.4ರಂದು ಸ್ವತಃ ನಿತ್ಯಾನಂದ ಕುಂಭಮೇಳಕ್ಕೆ ಆಗಮಿಸುತ್ತಿದ್ದು, ಫೆ. 14ರವರೆಗೆ ಹತ್ತು ದಿನಗಳ ಕಾಲ ಪ್ರತಿನಿತ್ಯ ಪ್ರವಚನ, ದಿನಕ್ಕೆರಡು ಯಜ್ಞಯಾಗ, ಯೋಗ ಧ್ಯಾನ ಶಿಬಿರಗಳನ್ನು ನಡೆಸಲಿದ್ದಾರೆ. ಕುಂಭಮೇಳಕ್ಕೆ ಆಗಮಿಸಿರುವ ಸಹಸ್ರಾರು ಭಕ್ತರನ್ನು ಕೆರಳಿಸಿರುವುದು ಇದೇ ಸಂಗತಿ.
ಒಬ್ಬ ಪೀಠಾಧಿಪತಿಯಾಗಿದ್ದುಕೊಂಡು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ನಿತ್ಯಾನಂದ ಪವಿತ್ರವಾದ ಮಹಾ ಕುಂಭಮೇಳಕ್ಕೆ ಬರುವುದು ಭಕ್ತಾದಿಗಳಿಗೆ ಬೇಡವಾಗಿದೆ. ಇಂಥ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವುದು ಬೇಡವೆಂದು ಭಕ್ತರ ನಿಯೋಗವೊಂದು ಜಿಲ್ಲಾ ಆಡಳಿತಾಧಿಕಾರಿಗಳಿಗೆ ದೂರು ನೀಡಿದೆ.
ಈಗಾಗಲೆ ಕುಂಭಮೇಳದಲ್ಲಿ ನಿತ್ಯಾನಂದನ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ನಿತ್ಯಾನಂದನ ಪ್ರತಿಮೆ ಸ್ಥಾಪಿಸಿ ಅದಕ್ಕೆ ಪೂಜೆ ಮಾಡುತ್ತಿರುವ ಅಸಹಜ, ವಿಕೃತ ನಡವಳಿಗೆ ಭಕ್ತಾದಿಗಳನ್ನು ಕೆರಳಿಸಿದೆ. ನಿತ್ಯಾನಂದನನ್ನು ಕುಂಭಮೇಳಕ್ಕೆ ಬರಲು ಅವಕಾಶ ಮಾಡಿಕೊಡಬಾರದು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕುಂಭಮೇಳಕ್ಕೆ ರಾಜಕಾರಣಿಗಳ ದಂಡು : ಮುಂದಿನ ವಾರದಲ್ಲಿ ರಾಷ್ಟ್ರ ರಾಜಕಾರಣಿಗಳ ದಂಡೇ ಕುಂಭಮೇಳಕ್ಕೆ ಆಗಮಿಸಲಿದೆ. ಬಿಜೆಪಿಯ ಹೊಸ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪುಣ್ಯಕ್ಷೇತ್ರದಲ್ಲಿ ಮಿಂದೇಳಲಿದ್ದಾರೆ. ಕಾಂಗ್ರೆಸ್‌ನ ಪ್ರಧಾನಿ ಅಧ್ಯರ್ಥಿ ಎಂದೇ ಬಿಂಬಿತವಾಗಿರುವ ಪಕ್ಷದ ನೂತನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಕುಂಭಮೇಳಕ್ಕೆ ಬರುವುದು ಖಚಿತವಾಗಿದೆ. ಈ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಆಗಮಿಸಿ ಪೂಜೆ ಸಲ್ಲಿಸಿದರು.












Click it and Unblock the Notifications