ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮಲಾಲ ನಾಮಾಂಕಿತ
ನ್ಯೂಯಾರ್ಕ್, ಫೆ.1: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೇರಣೆಯಾಗಿರುವ ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫಾಝಿ ಈ ಸಾಲಿನ ನೊಬೆಲ್ ಶಾಂತಿ ಪಾರಿತೋಷಕ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಪಾಕಿಸ್ತಾನದ ಶಾಲಾ ಬಾಲಕಿ ಮಲಾಲ್ ನೊಬೆಲ್ ಪುರಸ್ಕಾರಕ್ಕೆ ನಾಮಾಂಕಿತಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
14 ವರ್ಷದ ಮಲಾಲಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕರೆ ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಸಾಧಕಿ ಎಂಬ ಕೀರ್ತಿಗೆ ಪಾತ್ರಳಾಗುತ್ತಾಳೆ. ನೊಬೆಲ್ ನಾಮಾಂಕಣಕ್ಕೆ ಶುಕ್ರವಾರ ಕೊನೆ ದಿನವಾಗಿತ್ತು. ಫ್ರೆಂಚ್, ಕೆನಡಾ ಮತ್ತು ನಾರ್ವೆ ಸಂಸದರು ಪ್ರತ್ಯೇಕವಾಗಿ ಮಲಾಲ ಹೆಸರನ್ನು ಸೂಚಿಸಿದ್ದಾರೆ. ಅಕ್ಟೋಬರ್ ವೇಳೆಗೆ ಅಂತಿಮವಾಗಿ ಆಯ್ಕೆಯಾದವರ ಹೆಸರು ಘೋಷಿಸಲಾಗುತ್ತದೆ.

'ಮಲಾಲಳಿಗೆ ಪ್ರಶಸ್ತಿ ನೀಡುವ ಮೂಲಕ ಮಹಿಳೆಯರು ಹಾಗೂ ಮಕ್ಕಳ ಪರ ಹೋರಾಟಗಾರರಿಗೆ ಇನ್ನಷ್ಟು ಶಕ್ತಿ ತುಂಬಬಹುದು. ಮಾನವತಾವಾದ, ಪ್ರಜಾಪ್ರಭುತ್ವಕ್ಕೆ ನಿಜವಾದ ಬೆಲೆ ಒದಗಿಸಬಹುದು. ಶಾಂತಿಯುತ ವಾತಾವರಣದಲ್ಲಿ ಮಕ್ಕಳು ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಲು ಮಲಾಲಳಂಥ ಸಾಧಕರು ಬೇಕು' ಎಂದು ನಾರ್ವೆಯ ಶಾಂತಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಕ್ರಿಸ್ಟೀನ್ ಬರ್ಗ್ ಹರ್ಪ್ವಿಕೆನ್ ಹೇಳಿದ್ದಾರೆ.
ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫಾಝಿ ಗೌರವಾರ್ಥ ನ.10 ರಂದು 'ಮಲಾಲ ದಿನಾಚರಣೆ' ವಿಶ್ವದೆಲ್ಲೆಡೆ ಆಚರಿಸಲಾಗುವುದು ಎಂದು ವಿಶ್ವಸಂಸ್ಥೆ ಅಧ್ಯಕ್ಷ ಬಾನ್ ಕಿನ್ ಮೂನ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ವರ್ಷ ಅಕ್ಟೋಬರ್ 9 ರಂದು ಮಲಾಲ ಶಾಲೆಯಿಂದ ಹಿಂತಿರುಗುತ್ತಿದ್ದ ವೇಳೆ ತಾಲಿಬಾನಿಗಳು ಆಕೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಗೆ ಪಾಕಿಸ್ತಾನದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಅಲ್ಲಿಂದ ಆಕೆಯನ್ನು ಲಂಡನ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಲಾಲ ಈಗ ಚಿಕಿತ್ಸೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ಬಗ್ಗೆ ಈ 15 ವರ್ಷದ ದಿಟ್ಟ ಬಾಲಕಿ ಹೋರಾಡುತ್ತಿದ್ದಾಳೆ. ಪಾಕಿಸ್ತಾನದ ಶಾಂತಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಮಲಾಲ ಕನಸಿಗೆ ತಾಲಿಬಾನಿಗಳು ಅಡ್ಡ ನಿಂತಿದ್ದಾರೆ.
ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮಿಂಗೋರಾ ಎಂಬ ಸಣ್ಣ ಪಟ್ಟಣದಲ್ಲಿ ಮಲಾಲ ಹುಟ್ಟಿದ್ದು ಜುಲೈ 11, 1997. ತಾಲಿಬಾನಿಗಳ ಹುಟ್ಟೂರಾದ ಅಫಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಈ ಕಣಿವೆಯಲ್ಲಿ ಜನ ಜೀವನ ಕಷ್ಟಕರ.
ಕವಿ, ಶಿಕ್ಷಕನಾಗಿರುವ ಮಲಾಲ ತಂದೆ ಜಿಯಾಯುದ್ದಿನ್ 'ಖುಷಾಲ್ ಪಬ್ಲಿಕ್ ಸ್ಕೂಲ್' ಎಂಬ ಹೆಣ್ಣುಮಕ್ಕಳ ಶಾಲೆ ನಡೆಸುತ್ತಿದ್ದರು. ಮಗಳನ್ನು ಡಾಕ್ಟರ್ ಅಥವಾ ಭವಿಷ್ಯದ ರಾಜಕಾರಣಿ ಮಾಡುವ ಕನಸು ಹೊತ್ತಿದ್ದಾರೆ. 2009ರಲ್ಲಿ ಮಲಾಲಳಿಗೆ ಬಿಬಿಸಿಯ ಉರ್ದು ಪತ್ರಿಕೆಗೆ ಡೈರಿ ಬರೆಯುವ ಅವಕಾಶ ಸಿಕ್ಕಿತ್ತು.
11ನೇ ವಯಸ್ಸಿನಲ್ಲೇ ತಾಲಿಬಾನಿಗಳ ವಿರುದ್ಧ ಬಹಿರಂಗವಾಗಿ ಭಾಷಣ ಮಾಡಿದ ಮಲಾಲ, ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿದಳು. ಸ್ವಾತ್ ಕಣಿವೆಯಲ್ಲಿರುವ ಯಾವ ಹೆಣ್ಣುಮಕ್ಕಳೂ ಶಾಲೆಗಳಿಗೆ ಹೋಗಬಾರದೆಂದು ತಾಲಿಬಾನಿಗಳು ಕಟ್ಟಪ್ಪಣೆ ಹೊರಡಿಸಿದರೂ ಲೆಕ್ಕಿಸದೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸಿದ ಈ ಪುಟ್ಟ ಹೋರಾಟಗಾರ್ತಿಗೆ ತಾಲಿಬಾನಿ ರಕ್ಕಸರು ಗುಂಡಿಕ್ಕಿ ಕೊಲ್ಲಲು ವಿಫಲ ಯತ್ನ ನಡೆಸಿದರು.












Click it and Unblock the Notifications