ಬೆಂಗಳೂರು ನಗರ ಹೊರವಲಯದಲ್ಲಿ ಸ್ಪೀಕರ್ ಬೋಪಯ್ಯ?

ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಅಂತೆಕಂತೆ ಕಥೆಗಳು ಸೃಷ್ಟಿಯಾಗಿದೆಯೇ ಹೊರತು ಕರಾರುವಕ್ಕಾದ ಉತ್ತರ ಸಿಗುತ್ತಿಲ್ಲ. ಆದರೆ ಜನಶ್ರೀ ವಾಹಿನಿಗೆ ಲಭಿಸಿದ ಮಾಹಿತಿಯ ಪ್ರಕಾರ ಬೋಪಯ್ಯ ನೇಪಾಳಕ್ಕೂ ಹೋಗಿಲ್ಲ, ತವರಿನಲ್ಲೂ ಇಲ್ಲ ಬದಲಿಗೆ ಬೆಂಗಳೂರು ಹೊರವಲದಲ್ಲಿದ್ದಾರೆ ಎಂದು ವರದಿ ಮಾಡಿದೆ.
ಸ್ಪೀಕರ್ ಅವರು ಬೆಂಗಳೂರು ಹೊರವಲದ ನೈಸರ್ಗಿಕ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಇದ್ದಾರೆ. ಅವರು ಪ್ರೋಟೋಕಾಲ್ ಉಲ್ಲಂಘನೆ ಮಾಡಿಲ್ಲ ಎಂದು ವಿಧಾನಸಭಾ ಕಾರ್ಯಾಲಯದ ಅಧಿಕಾರಿಗಳು ತಮ್ಮ ವಾಹಿನಿಗೆ ತಿಳಿಸಿದ್ದಾರೆಂದು ಜನಶ್ರೀ ವಾಹಿನಿ ವರದಿ ಬಿತ್ತರಿಸುತ್ತಿದೆ.
ಅವರು ಎರಡೂ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಅವರು ತಮ್ಮ ತವರೂರು ಬಿಟ್ಟು ಬೆಂಗಳೂರು ಅಥವಾ ಹೊರದೇಶಕ್ಕೆ ಹೊರಡಲೇ ಇಲ್ಲ. ಮಡಿಕೇರಿ ಹೊರವಲಯದಲ್ಲೇ ಇರಬಹುದು ಎಂದು ಟಿವಿ9 ಅನುಮಾನ ವ್ಯಕ್ತ ಪಡಿಸಿದೆ.
ಒಂದು ಮೂಲಗಳ ಪ್ರಕಾರ ಬೋಪಯ್ಯ ಫೆಬ್ರವರಿ ಮೂರನೇ ತಾರೀಕಿನ ಮುನ್ನ ತನ್ನ ಕಚೇರಿಗೆ ಹಾಜರಾಗುವುದು ಸಂಶಯ ಎನ್ನಲಾಗಿದೆ. ಒಂದು ವೇಳೆ ರಾಜ್ಯಪಾಲ ಭಾರದ್ವಾಜ್ ಬಿಕ್ಕಟ್ಟು ಪರಿಹರಿಸಲು ಮಧ್ಯಪ್ರವೇಶಿಸಿ ಸ್ಪೀಕರ್ ಗೆ ಕಚೇರಿಗೆ ಹಾಜರಾಗಲು ಸೂಚನೆ ನೀಡಿದರೆ ಮಾತ್ರ ಈ ದಿನಾಂಕದ ಮುನ್ನ ಅವರು ಕಚೇರಿಗೆ ಹಾಜರಾಗಬಹುದು.
ವಿಪರ್ಯಾಸ ಅಂದರೆ ಇದೇ ಅಲ್ವೇ : ರಾಜಕೀಯದ ಚದುರಂಗದಾಟಕ್ಕೆ ಸ್ಪೀಕರ್ ಕುರ್ಚಿಯನ್ನೂ ಬಳಸಿಕೊಳ್ಳಬಹುದು ಎಂದು ಒಂದು ರೀತಿಯಲ್ಲಿ ಪರಿಚಯಿಸಿ ಕೊಟ್ಟವರು ಯಡಿಯೂರಪ್ಪ. ಈಗ ಇದೇ ಕುರ್ಚಿಯನ್ನು ಅವರ ವಿರುದ್ದವೇ ತಿರುಗಿಸಿ ಬಿಜೆಪಿ ತಾತ್ಕಾಲಿಕ ಜಯದ ನಗೆ ಬೀರಿದ್ದಂತೂ ನಿಜ.
2010ರಲ್ಲಿ ಬಾಲಚಂದ್ರ ಜಾರಕಿಹೊಳೆ ನೇತೃತ್ವದಲ್ಲಿ 16 ಮಂದಿ ಶಾಸಕರು ಯಡಿಯೂರಪ್ಪ ವಿರುದ್ದ ಬಂಡಾಯ ಎದ್ದಾಗ ಸ್ಪೀಕರ್ 16 ಶಾಸಕರನ್ನು ಅನರ್ಹಗೊಳಿಸಿದ್ದರು. ಯಡಿಯೂರಪ್ಪ ಅಡ್ಡ ದಾರಿಯ ಮೂಲಕ ವಿಶ್ವಾಸ ಮತ ಗೆದ್ದಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಸ್ಪೀಕರ್ ತೀರ್ಪಿಗೆ ಅಸ್ತು ಎಂದಿದ್ದರೂ ಸುಪ್ರೀಂಕೋರ್ಟ್ ಸ್ಪೀಕರ್ ಬೋಪಯ್ಯ ಅವರಿಗೆ ಛೀಮಾರಿ ಹಾಕಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.












Click it and Unblock the Notifications