ಹೌಹಾರಿದ KSRTC: ಬಸ್ ದರದಲ್ಲಿ ಭಾರೀ ಏರಿಕೆ?

ಆದರೆ ಐಒಸಿಯಿಂದ ಬಿಲ್ ಬಂದಾಗ ಒಂದು ಕ್ಷಣ ದಂಗಾದೆವು ಎಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಹೇಳಿಕೆ ನೀಡುವ ಮೂಲಕ ಬಸ್ ಪ್ರಯಾಣದ ದರದಲ್ಲಿ ಭಾರೀ ಪ್ರಮಾಣದ ಏರಿಕೆಯ ಬಗ್ಗೆ ಸಂಸ್ಥೆ ಸ್ಪಷ್ಟ ಮುನ್ಸೂಚನೆ ನೀಡಿದೆ.
ಸಗಟು ಡೀಸೆಲ್ ದರದ ಬೆಲೆಯನ್ನು ಕೇಂದ್ರ ಸರಕಾರ ಏಕಾಏಕಿ ಲೀಟರ್ ವೊಂದಕ್ಕೆ ಸುಮಾರು 12 ರೂಪಾಯಿಯಷ್ಟು ಹೆಚ್ಚಿಸಿದೆ. ಇದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ವಾರ್ಷಿಕ 630 ಕೋಟಿ ಹೊರೆಯಾಗಲಿದೆ.
ಈ ಹೊರೆಯನ್ನು ಸಾರ್ವಜನಿಕರ ಮೇಲೆ ವರ್ಗಾಯಿಸುವ ಸಾಧ್ಯತೆ ದಟ್ಟವಾಗಿದ್ದು ಇಂದಿನಿಂದಲೇ (ಜ 19) ಪರಿಷ್ಕೃತ ದರ ಜಾರಿಗೊಳ್ಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಸರಕಾರದ ಹೊಸ ಕಾನೂನು: ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಬಳಸುವ ಬಳಕೆದಾರರಿಗೆ ಮಾರುಕಟ್ಟೆ ಬೆಲೆಯಲ್ಲಿ ಇಂಧನ ಪೂರೈಸುವಂತೆ ಕೇಂದ್ರ ಸರಕಾರ ಗುರುವಾರ (ಜ 17) ಎಲ್ಲಾ ತೈಲ ಕಂಪನಿಗಳಿಗೆ ಆದೇಶ ನೀಡಿತ್ತು.
ಹೊಸ ಆದೇಶವನ್ನು ತೈಲ ಕಂಪೆನಿಗಳು ಶುಕ್ರವಾರದಿಂದಲೇ (ಜ 18) ಜಾರಿಗೆ ತಂದಿತ್ತು. ಇದರನ್ವಯ ರಾಜ್ಯ ಸಾರಿಗೆ ಸಂಸ್ಥೆ ಪ್ರತಿ ಲೀಟರ್‌ಗೆ 11.90 ಪೈಸೆ ಹೆಚ್ಚುವರಿ ದರ ಪಾವತಿಸಿ ಡೀಸೆಲ್ ಖರೀದಿಸುವುದು ಅನಿವಾರ್ಯವಾಗಿದೆ.
ಇದನ್ನು ಸರಿದೂಗಿಸಲು ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 15ರಿಂದ 20 ಪೈಸೆ ಹೆಚ್ಚಿಸದೆ ಬೇರೆ ದಾರಿಯಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.
ಕಳೆದ ಸೆಪ್ಟಂಬರ್ ನಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದ್ದಾಗ ಬಸ್ ದರದಲ್ಲಿ ಹೆಚ್ಚಳವಾಗಿತ್ತು. ಮತ್ತೆ ಬಸ್ ದರದಲ್ಲಿ ಏರಿಕೆ ಮಾಡುಲು ಅದೂ ಚುನಾವಣೆಯ ಸಮಯದಲ್ಲಿ ಸಾರಿಗೆ ಸಚಿವ ಅಶೋಕ್ ಹಿಂದೇಟು ಹಾಕುತಿದ್ದಾರೆ ಎನ್ನಲಾಗುತ್ತಿದೆ.
ಆದರೂ ಸಾರಿಗೆ ಸಂಸ್ಥೆ ಆರ್ಥಿಕವಾಗಿ ಮುಗ್ಗರಿಸದೇ ಇರುಲು ದರ ಹೆಚ್ಚಿಳ ಅನಿವಾರ್ಯ ಎನ್ನುವುದು ಸಂಸ್ಥೆಯ ಹಿರಿಯ ಅಧಿಕಾರಿಗಳ ಹೇಳಿಕೆ.
ಎರಡು ಮೂರು ರೂಪಾಯಿ ಹೆಚ್ಚಾದಾಗಲೇ ಬಿಟ್ಟಿಲ್ಲ, ಇನ್ನು 12 ರೂಪಾಯಿ ಜಾಸ್ತಿ ಆದರೆ ದರ ಹೆಚ್ಚಿಸದೇ ಬಿಡ್ತಾರಾ ಎನ್ನುವುದು ಜನಸಾಮಾನ್ಯರ ಮಾತು.
ರೈಲ್ವೆ ಇಲಾಖೆ : ಡೀಸೆಲ್ ದರ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ರೈಲ್ವೆ ಇಲಾಖೆಗೆ ವಾರ್ಷಿಕ 2700 ಕೋಟಿ ರೂಪಾಯಿ ಹೊರೆಯಾಗಲಿದೆ. ರೈಲ್ವೆ ಇಲಾಖೆ ಲೀಟರ್ಗೆ 10.80 ರೂಪಾಯಿ ಹೆಚ್ಚು ಪಾವತಿಸಬೇಕಾಗಿದ್ದು, ಇದರಿಂದ ದರ ಏರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.












Click it and Unblock the Notifications