ಬೆಲೆ ಈ ಪರಿ ಏರುಪೇರಾದರೆ ಬದುಕೋದು ಹೇಗೆ?

ಕರ್ನಾಟಕದಲ್ಲಿ ಅಕ್ಕಿಯ ತೀವ್ರ ಕೊರತೆ ಕಂಡುಬಂದಿರುವುದು ಅಕ್ಕಿ ಬೆಲೆ ಹೆಚ್ಚಳಕ್ಕೆ ಕಾರಣ. ಅಕ್ಕಿ ವ್ಯಾಪಾರಿಗಳು ಗ್ರಾಹಕರ ಮೇಲೆ ಹೊರೆ ಹೊರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಕಚ್ಚಾ ಅಕ್ಕಿಯ ಬೆಲೆ ಕೆಜಿಗೆ 50 ರು. ಆಸುಪಾಸು ಮುಟ್ಟಲಿದ್ದರೆ, ಸ್ಟೀಮ್ ರೈಸ್ ಬೆಲೆ ಕೆಜಿಗೆ 42 ರು. ಆಗಲಿದೆ.
ಡೀಸೆಲ್ ಬೆಲೆ ಕೂಡ ಆಕಾಶ ಮಾರ್ಗ ಹಿಡಿದಿರುವುದರಿಂದ ಎಲ್ಲ ಅಗತ್ಯವಸ್ತುಗಳ ಬೆಲೆಗಳು ಕೂಡ ಅದೇ ದಾರಿ ಹಿಡಿಯುವುದು ನಿಶ್ಚಿತ. ಅಕ್ಕಿಯನ್ನೇ ಆಹಾರವನ್ನಾಗಿಸಿಕೊಂಡಿರುವ ಜನತೆ ಕಾಳುಕಾಳಿಗೂ ಲೆಕ್ಕ ಹಾಕಿ ಅನ್ನ ತಯಾರಿಸಬೇಕಾದ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ಇನ್ನು ಅಕ್ಕಿಯ ದುರ್ಬಳಕೆಯಾಗದಂತೆ ಮಿತವಾಗಿ ಬಳಸುವುದು ಹೇಗೆ ಎಂಬ ಕುರಿತು ಬಡವವರು ಮತ್ತು ಮಧ್ಯಮ ವರ್ಗದವರು ಸಂಶೋಧನೆ ಮಾಡಬೇಕು.
ಎಲ್‌ಪಿಜಿ ಬೆಲೆಯಲ್ಲೂ ಹೆಚ್ಚಳ : ನಿರೀಕ್ಷೆಯಂತೆ ರಿಯಾಯಿತಿ ದರದಲ್ಲಿ ಸಿಗುವ ಅಡುಗೆ ಅನಿಲ ಸಿಲಿಂಡರುಗಳ ಸಂಖ್ಯೆಯನ್ನು ವರ್ಷಕ್ಕೆ 6ರಿಂದ 9ಕ್ಕೆ ಹೆಚ್ಚಿಸಿರುವ ಕೇಂದ್ರ ಸರಕಾರ, ಮಿತಿಯ ನಂತರ ಪಡೆಯುವ ರಿಯಾಯಿತಿ ಇಲ್ಲದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 46.50 ರು.ಗೆ ಹೆಚ್ಚಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಇದರ ಪ್ರಕಾರ, 9 ಸಿಲಿಂಡರ್ ಕೋಟಾ ಮುಗಿದ ನಂತರ ಪಡೆಯುವ 14.2 ಕೆಜಿ ಅಡುಗೆ ಅನಿಲ ಸಿಲಿಂಡರಿಗೆ ಇನ್ನು ಮುಂದೆ 942 ರು. ನೀಡಬೇಕಾಗುತ್ತದೆ. ರಿಯಾಯಿತಿ ದರದಲ್ಲಿ ನೀಡುವ ಅಡುಗೆ ಅನಿಲ ಸಿಲಿಂಡರ್ ಮಿತಿಯನ್ನು ಹೆಚ್ಚಿಸಿರುವುದರಿಂದ ಆಗುತ್ತಿರುವ ನಷ್ಟವನ್ನು ಭರಿಸಲು ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಹಾಲಿನ ದರದಲ್ಲಿ ಏರಿಕೆ ದೂರವಿಲ್ಲ : ಬಡವರು ಸಂಸಾರ ರಥವನ್ನು ಸರಿದೂಗಿಸಬೇಕಿದ್ದರೆ ಮೊದಲೇ ನೀರಾಗಿರುವ ಹಾಲಿಗೆ ಇನ್ನಷ್ಟು ನೀರನ್ನು ಸೇರಿಸಿ ಅತಿಥಿಗಳಿಗೆ ಚಹಾ ಮಾಡಿ ಕೊಡುವ ದಿನಗಳೂ ದೂರವಿಲ್ಲ. ಕೆಎಂಎಫ್ ಚೀಫ್ ಜಿ. ಸೋಮಶೇಖರ ರೆಡ್ಡಿ ಘೋಷಿಸಿದಂತೆ ಜ.21ರಂದು ಹಾಲಿನ ದರವನ್ನು ಹೆಚ್ಚಿಸುವ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
ಇದೇ ತಿಂಗಳು ಜ.13ರಂದು ಬೆಂಗಳೂರಿನಲ್ಲಿ ನಡೆದ ಹಾಲು ಮಾರಾಟಗಾರರ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಈ ಕುರಿತು ಚರ್ಚಿಸಲಾಗಿದ್ದು, ಹಾಲಿನ ಬೆಲೆ ಏರುವುದು ಖಚಿತ ಎಂದು ಹೇಳಿದ್ದಾರೆ. ಲೀಟರಿಗೆ ಕನಿಷ್ಠಪಕ್ಷ 3 ರು. ಏರಿಕೆಯಾಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೆ ಮಧ್ಯಮವರ್ಗದವರು ಪ್ರತಿ ತಿಂಗಳು ಹಾಕುತ್ತಿದ್ದ ಬಜೆಟ್ಟಿನ ಲೆಕ್ಕಾಚಾರ ತಾಳ ತಪ್ಪುತ್ತಿದೆ. ನೆಂಟರನ್ನು ಮನೆಗೆ ಕರೆಯಬೇಕೋ ಬೇಡವೋ ಎಂಬ ಬಗ್ಗೆ ನಾಲ್ಕು ಬಾರಿ ಚಿಂತಿಸುವಂತಾಗಿದೆ. ಸರಕಾರ ಈ ಕುರಿತು ಕೂಡಲೆ ಚಿಂತನೆ ನಡೆಸಬೇಕು. ಆಹಾರ ಹಣದುಬ್ಬರ ತಗ್ಗಿಸುವತ್ತ ತಲೆ ಕೆಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಬೆಲೆ ಈ ಪರಿ ಏರುಪೇರಾದರೆ ಬಡವರು ಬದುಕೋದು ಹೇಗೆ? ಹೇಳಿ.












Click it and Unblock the Notifications