ಗೌಡ್ರ ಕುಟುಂಬಸ್ಥರು ಆಸ್ತಿ ಘೋಷಿಸುವಾಗ ಹುಷಾರು

ಇದೆಲ್ಲಾ ಯಾಕೆ ಹೇಳಬೇಕಾಗಿ ಬಂದಿದೆಯೆಂದರೆ ಗೌಡರ ಕುಟಂಬದ ಕಟ್ಟಾ ವಿರೋಧಿ, ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ನೈಸ್ ಅಶೋಕ್ ಖೇಣಿ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ಗಳಿಸಿರುವ ಅಕ್ರಮ ಆಸ್ತಿಪಾಸ್ತಿ ವಿವರಗಳನ್ನು ಚುನಾವಣೆ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಹಳೆಯ ಖಾಸಗಿ ಬಸ್ ನಿಲ್ದಾಣದ ಮೈದಾನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಮಕ್ಕಳ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
'ಹಾಸನ ಜಿಲ್ಲೆಯಲ್ಲಿ ಕೇವಲ 3 ಎಕರೆ ಜಮೀನು ಹೊಂದಿದ್ದ ದೇವೇಗೌಡ ಮತ್ತು ಕುಟುಂಬದವರು ಸಾವಿರಾರು ಕೋಟಿ ರೂ.ಗಳ ಆಸ್ತಿ ಹಣ ಸಂಪಾದಿಸಿದ್ದು ಹೇಗೆ? ಇವರಲ್ಲಿ ಎಷ್ಟು ಅಕ್ರಮ ಆಸ್ತಿ ಇದೆ? ಎಂಬ ವಿವರ ದಾಖಲೆ ಸಮೇತ ನನ್ನ ಬಳಿ ಇದೆ ಎಂದಿದ್ದಾರೆ.
ಗಮನಾರ್ಹವೆಂದರೆ ಖೇಣಿ ಸಾಹೇಬರು ಈ ದಾಖಲೆಯನ್ನು ಕರ್ನಾಟಕ ಲೋಕಾಯುಕ್ತಕ್ಕೆ ಕೊಡುವುದಿಲ್ಲವಂತೆ. ಏಕೆಂದರೆ ದೇವೇಗೌಡರು ಮತ್ತು ಮಕ್ಕಳು ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವ ಬೀರುತ್ತಾರಂತೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಗೌಡ್ರ ಕುಟುಂಬಸ್ಥರು ಆಸ್ತಿ ವಿವರ ಘೋಷಿಸಲಿ. ಆಗ ಅವರ ಇನ್ನುಳಿದ ಆಸ್ತಿ ವಿವರವನ್ನು ಸುಪ್ರಿಂ ಕೋರ್ಟ್‌ಗೆ ನಾನು ಸಲ್ಲಿಸುತ್ತೇನೆ ಎಂದು ಬೆದರಿಸಿದ್ದಾರೆ.












Click it and Unblock the Notifications