ಕಾಲಲ್ಲಿ ಅಬ್ಬು, ಸಿದ್ದರಾಮಯ್ಯ retired hurt!

'ಕಾಂಗ್ರೆಸ್ ನಡಿಗೆ- ಕೃಷ್ಣೆಯ ಕಡೆಗೆ' ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರೆ 65 ವರ್ಷದ ಸಿದ್ದರಾಮಯ್ಯನವರು ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಗ್ರಾಮದ ಬಳಿ ಬರುವ ವೇಳೆಗೆ ಉದ್ದಕ್ಕೆ ಮೈಚಾಚಿ ಮಲಗಿಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಯಾಕೋ ಮಹಾತ್ಮ ಗಾಂಧಿ, ವಿನೋಬಾ ಭಾವೆ, ಚಂದ್ರಶೇಖರ್ ಮತ್ತು ವೈಎಸ್ಆರ್ ರೆಡ್ಡಿ ನೆನಪಿಗೆ ಬರುತ್ತಿದ್ದಾರೆ.
'ನನ್ನಿಂದ ಇನ್ನು ಒಂದು ಹೆಜ್ಜೆಯನ್ನೂ ಎತ್ತಿಡೋಕ್ಕಾಗೊಲ್ಲ. ನಿಮ್ಮ ದಾರಿ ನಿಮಗೆ. ನನ್ನನ್ನಿನ್ನು ಕರೀಬೇಡಿ. ನೋಡಿ ಕಾಲಲ್ಲಿ ಹೇಗೆ ಅಬ್ಬು ಎದ್ದಿದೆ' ಎಂದು ಚಿಕ್ಕಮಕ್ಕಳಂತೆ ಕುಳಿತುಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಬಳ್ಳಾರಿಯಿಂದ ಬಸವಕಲ್ಯಾಣದವರೆಗೂ ಜನವರಿ 7ರಂದು ಪಾದಯಾತ್ರೆ ಆರಂಭಿಸಿದೆ.
ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಾ ಜಿ ಪರಮೇಶ್ವರ್, ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿನ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಎಸ್ ಆರ್ ಪಾಟೀಲ ಸೇರಿದಂತೆ ಅನೇಕ ನಾಯಕರಿಗೆ ಹೊಸಪೇಟೆಯ ಐಷಾರಾಮಿ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ 2011ರ ಸೆಪ್ಟಂಬರ್‌ನಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲೂ ಪಕ್ಷದ ಕೆಲ ನಾಯಕರು ಹೀಗೆ ವರ್ತಿಸಿದ್ದರು. ಅದಕ್ಕೂ ಮುನ್ನ ಬಳ್ಳಾರಿಯತ್ತ ಗಣಿ ರೆಡ್ಡಿಯತ್ತ ದಂಡೆತ್ತಿ ಹೋದಾಗಲೂ ಸಿದ್ದರಾಮಯ್ಯನವರಿಗೇ ಇದೇ ಅನುಭವವಾಗಿತ್ತು.
ಪ್ರಸ್ತುತ, ಸಿದ್ದರಾಮಯ್ಯನವರು ವಿಜಯನಗರದಲ್ಲಿ ಕಾಂಗ್ರೆಸ್ ಝಂಡಾ ಹೂಡಿದ್ದಾರೆ. ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯನವರಿಗೆ ಸ್ಥಳೀಯ ಉತ್ಸಾಹಿ ಕಾರ್ಯಕರ್ತರು ಕಾಲು ನೀವಲು ನಾಮುಂದು ತಾಮುಂದು ಎಂದು ಅವರ ಸುತ್ತ ನೆರೆದಿದ್ದಾರೆ.












Click it and Unblock the Notifications