ಶಾಪಗ್ರಸ್ತ 'ನಗರ'ಕ್ಕೆಮುಖ್ಯಮಂತ್ರಿ ಶೆಟ್ಟರ್ ಭೇಟಿ

"ಮೂಢನಂಬಿಕೆಗೆ ಜೋತುಬಿದ್ದು ಈ ಹಿಂದಿನ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ ಎನ್ನುವುದಾದರೆ ನಾನು ಈ ನಂಬಿಕೆ ಸುಳ್ಳು ಮಾಡುತ್ತೇನೆ. ನಗರಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತೇನೆ. ಈ ಹಿಂದಿನ ಸಿಎಂಗಳು ಅಧಿಕಾರ ಕಳೆದುಕೊಳ್ಳಲು ಬೇರೆ ಕಾರಣಗಳಿರಬಹುದು ಇದಕ್ಕೆ ನಗರಕ್ಕೆ ನೀಡಿದ ಭೇಟಿ ಕಾರಣ ಎನ್ನುವುದು ಸರಿಯಿಲ್ಲ" ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಆರು ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇದೇ ರೀತಿ ಕಿತ್ತೂರು ಉತ್ಸವ ಉದ್ಘಾಟಿಸುವುದು ಹಾಗೂ ಸವದತ್ತಿ ಎಲ್ಲಮ್ಮನ ಗುಡಿಗೆ ತೆರಳಿದ ಮುಖ್ಯಮಂತ್ರಿ ಕೂಡಾ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಬೆಳೆದು ಬಿಟ್ಟಿದೆ.
1997 ಆಗಸ್ಟ್ 15 ರಂದು ಚಾಮರಾಜನಗರ ಘೋಷಿಸಿದ್ದು ಅಂದಿನ ಜೆ. ಎಚ್ ಪಟೇಲ್ ಅವರು, ಆದರೆ, ಅವರು ಮಲೆಮಹದೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರೂ ನಗರಕ್ಕೆ ಕಾಲಿಡಲಿಲ್ಲ.
ದೇವರಾಜ ಅರಸ್, ವೀರೇಂದ್ರ ಪಾಟೀಲ್, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ ಅಧಿಕಾರ ಕಳೆದುಕೊಂಡ ಉದಾಹರಣೆಗಳಿದೆ.
ನಂತರ ಎಸ್ ಎಂ ಕೃಷ್ಣ, ಎಸ್ ಬಂಗಾರಪ್ಪ, ಧರಂಸಿಂಗ್, ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದ ಗೌಡ ಕೂಡಾ ತಮ್ಮ ಅಧಿಕಾರಾವಧಿಯಲ್ಲಿ ಚಾಮರಾಜನಗರಕ್ಕೆ ಕಾಲಿಟ್ಟಿರಲಿಲ್ಲ.
ಎಚ್ಡಿಕೆ ಅಪವಾದ: 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು 20-20 ಕರಾರಿನಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು.
ಅಧಿಕಾರ ಬಿಡುವ ಕೆಲ ತಿಂಗಳುಗಳ ಹಿಂದಷ್ಟೇ 2007 ಸೆಪ್ಟೆಂಬರ್ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ ಕಾರಣ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದ ಅಧಿಕಾರ ಹೋಯಿತು ಎಂಬ ಪುಕಾರಿನಿಂದ ಪಾರಾಗಿದ್ದರು.
ಈಗ ಶೆಟ್ಟರ್ ಕೂಡಾ ಇದೇ ತಂತ್ರ ಅನುಸರಿಸುತ್ತಿದ್ದಾರೆ. ಮೇ, 2013ಕ್ಕೆ ಬಿಜೆಪಿ ಸರ್ಕಾರದ ಅಧಿಕಾರ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಚುನಾವಣೆ ಮುಂದಿಟ್ಟುಕೊಂಡು ಮೂಢನಂಬಿಕೆ ತೊಲಗಿಸುವ ಯತ್ನ ನಡೆಸಿದ್ದಾರೆ.
ಪ್ರತಿಭಟನೆ: ಸಿಎಂಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ ಪಕ್ಷಗಳ ಕಾರ್ಯಕರ್ತರು ಪಕ್ಷಬೇಧ ಮರೆದು ಹಲವು ಬಾರಿ ಬೀದಿಗಿಳಿದು ಹೋರಾಟ ನಡೆಸಿದ್ದಿದೆ.
ವಾಟಾಳ್ ನಾಗರಾಜ್ ಅವರಂತೂ ಮುಖ್ಯಮಂತ್ರಿ ತಿಂಗಳೊಳಗೆ ಚಾಮರಾಜನಗರಕ್ಕೆ ಭೇಟಿ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದರು. ಗಡಿ ಜಿಲ್ಲೆ ಚಾಮರಾಜನಗರವನ್ನು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುವ ಬೆದರಿಕೆಯನ್ನು ಒಡ್ಡಿದ್ದರು.












Click it and Unblock the Notifications