ಶೋಭಾಗೆ ಕೊಕ್ ಇಲ್ಲ, ಸಂಪುಟ ವಿಸ್ತರಣೆಗೆ ಚಿಂತನೆ

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಎಸ್ ಯಡಿಯೂರಪ್ಪ ಅವರ ಆಪ್ತರನ್ನು ಹೊರಹಾಕದಿರಲು ಬಿಜೆಪಿ ನಿರ್ಧರಿಸಿದೆ. ಜೊತೆಗೆ ಸಂಕ್ರಾಂತಿ ವೇಳೆಗೆ ಸಚಿವ ಸಂಪುಟ ವಿಸ್ತರಣೆ ಮಾಡಿ ಬಿಎಸ್ ವೈ ವಿರೋಧಿಗಳಿಗೆ ಸಚಿವ ಪಟ್ಟ ಕಟ್ಟಲು ನಿರ್ಧರಿಸಲಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿದೆ.
ಸಚಿವ ಸಂಪುಟದಿಂದ ಸಿಎಂ ಉದಾಸಿ, ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಕೈ ಬಿಡುವುದು ಖಚಿತ. ಮುಂದಿನ ಸರದಿಯಲ್ಲಿ ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ ಇನ್ನಿತರರನ್ನು ಹೊರ ಹಾಕಲಾಗುವುದು ಎಂದು ಎಚ್ಚರಿಕೆ ಸಂದೇಶ ಹೊರಬಿದ್ದಿತ್ತು.
ಆದರೆ, ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವವರನ್ನು ವಜಾಗೊಳಿಸಿ ಅಪವಾದ ಕಟ್ಟಿಕೊಳ್ಳುವ ಬದಲು ಅವರಾಗೇ ರಾಜೀನಾಮೆ ನೀಡುವ ತನಕ ಕಾಯುವುದು ಉತ್ತಮ ಎಂದು ಬಿಜೆಪಿ ನಿರ್ಧರಿಸಿದೆ.
ಖಾಲಿ ಹುದ್ದೆ ತುಂಬಿ: ಬಿಜೆ ಪುಟ್ಟಸ್ವಾಮಿ, ಸುನೀಲ್ ವಲ್ಯಾಪುರೆ ಅವರ ರಾಜೀನಾಮೆಯಿಂದಾಗಿ ಶೆಟ್ಟರ್ ಸಂಪುಟದಲ್ಲಿ ತೆರವಾಗಿರುವ ಸ್ಥಾನಕ್ಕೆ ಸಮರ್ಥರನ್ನು ಕೂರಲು ಆಗದೆ ಬಿಜೆಪಿ ಒದ್ದಾಡುತ್ತಿದೆ.
ಈಗ ಏಕಾಏಕಿ ಸಚಿವರು, ಶಾಸಕರನ್ನು ಕಿತ್ತು ಹಾಕಿದರೆ, ಸರ್ಕಾರ ಉಳಿದರೂ ಖಾಲಿ ಹುದ್ದೆ ಭರ್ತಿಯಲ್ಲೇ ಕಾಲ ವ್ಯರ್ಥವಾಗುವ ಚಿಂತೆ ಕಾಡುತ್ತಿದೆ.
ಸರ್ಕಾರ ಉರುಳಿಸಿದ ಅಪವಾದ ಯಡಿಯೂರಪ್ಪ ಅವರ ಮೇಲೆ ಬಂದರೆ ಬಿಜೆಪಿಗೆ ಲಾಭ. ಕೆಜೆಪಿ vs ಬಿಜೆಪಿ ಸಮರದಲ್ಲಿ ಜನರ ಮುಂದೆ ಅನುಕಂಪದ ಅಲೆ ಮೇಲೆ ಮತ ಯಾಚಿಸಲು ಬಿಜೆಪಿಗೆ ಅನುಕೂಲವಾಗುತ್ತದೆ.
ಹೀಗಾಗಿ ಸಂಕ್ರಾಂತಿ ಆಸು ಪಾಸಿನಲ್ಲಿ ಸಚಿವ ಸಂಪುಟ ವಿಸ್ತರಣೆ ಸಂಭವ ಹೆಚ್ಚಿದ್ದು, ಡಿ.ಎಸ್ ವೀರಯ್ಯ ಹಾಗೂ ಬೇಳೂರು ಗೋಪಾಲಕೃಷ್ಣ ಅವರು ಸಂಪುಟ ಸೇರುವ ಸಾಧ್ಯತೆ ಹೆಚ್ಚಿದೆ.
ವಿಧಾನಸಭೆ ಚುನಾವಣೆಗೆ ಬಿಜೆಪಿ ತಯಾರಿ ಜಾರಿಯಲ್ಲಿದ್ದು, ಜ.20ರಿಂದ ಪ್ರಚಾರ ಕಾರ್ಯ ಆರಂಭಿಸಲು ನಿಶ್ಚಯಿಸಲಾಗಿದೆ. ಬೆಂಗಳೂರಿನಲ್ಲಿ ಮಾರ್ಚ್ 3ರಂದು ಬೃಹತ್ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದ್ದು, ದೆಹಲಿಯ ಹಿರಿಯ ನಾಯಕರನೇಕರು ಈ ಪ್ರಚಾರ ಕಾರ್ಯದಲ್ಲಿ ಮತ್ತು ಬೆಂಗಳೂರು ಸಭೆಯಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications