ರಾಮುಲು ಸಿದ್ಧತೆ ಜೋರು, 5 ಲಕ್ಷ ಛತ್ರಿ ವಿತರಣೆ
ಬೆಂಗಳೂರು, ಜ.2: ಬಿಜೆಪಿಗೆ ಗುಡ್ ಬೈ ಹೇಳಿ ಸ್ವತಂತ್ರ ಹಕ್ಕಿಯಾಗಿ ಬಳ್ಳಾರಿ ಗ್ರಾಮಾಂತರದಲ್ಲಿ ನಿಂತು ಗೆದ್ದ ಶಾಸಕ ಬಿ ಶ್ರೀರಾಮುಲು ಅವರಿಗೆ ಆಗಲೇ ಒಂದು ವಿಷಯ ಸ್ಪಷ್ಟವಾಗಿತ್ತು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು ಎಂಬುದು.
ಏಕೆಂದರೆ ಅದುವರೆಗೂ ರಾಜ್ಯ ಬಿಜೆಪಿ ಸರಕಾರವನ್ನು ಆಪರೇಶನ್ ಕಮಲದ ಮೂಲಕ ನೀರೆರೆಯುತ್ತಿದ್ದ ದೊರೆ ಚಂಚಲಗೂಡ ಜೈಲುವಾಸಿಯಾಗಿದ್ದರು. ತದನಂತರದ ಬೆಳವಣಿಗೆಗಳಲ್ಲಿ ಬಿಜೆಪಿ ಮತ್ತು 'ಆಪರೇಶನ್ ಕಮಲ'ಕ್ಕೆ ಹರಿಸುತ್ತಿದ್ದ ನೀರನ್ನು ನಿಲ್ಲಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ರಾಮುಲು ಮೂಲಕ ಪಕ್ಷಕ್ಕೆ ಗುಡ್ ಬೈ ಹೇಳಿಸಿ, ಅವರಿಗೆ ಸಂಪೂರ್ಣ 'ಸ್ವಾತಂತ್ರ್ಯ' ನೀಡಿದರು.

ಹೀಗೆ ಹಿರಿಯಣ್ಣನಿಂದ ಆಶೀರ್ವಾದ ಸಿಕ್ಕಿದ್ದೇ ತಡ ರಾಮುಲು ರಾಜಕೀಯ ನಡೆ-ನುಡಿ-ಗುರಿ ಸ್ಪಷ್ಟವಾಗುತ್ತಾ ಹೋಯಿತು. ಹೊಸ ಪಕ್ಷ ಕಟ್ಟಿ, ಮುಂದಿನ ಚುನಾವಣೆ ವೇಳೆಗೆ ಅದನ್ನು ಸಶಕ್ತಗೊಳಿಸುವುದು ಅವರ ತಕ್ಷಣದ ಉದ್ದೇಶವಾಗಿತ್ತು. ಅದರ ರಾಜಕೀಯ ಗುರಿ ಏನಾದರೂ ಆಗಿರಬಹುದು. ಆದರೆ ಪಕ್ಷವನ್ನು ಕಟ್ಟಿ ಬೆಳೆಸುವುದಕ್ಕೆ ಟೊಂಕಕಟ್ಟಿ ನಿಂತರು. ಅಂದಿನಿಂದಲೇ ಅಂದರೆ ಬಳ್ಳಾರಿ ಉಪಚುನಾವಣೆಯಿಂದಲೇ ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗತೊಡಗಿದರು.
ಮತ್ತು ಇತರೆ ಪಕ್ಷಗಳು ಇನ್ನೂ ನಿದ್ದೆಯಲ್ಲೇ ಇರುವಾಗ ನಾಡಿನಾದ್ಯಂತ ಆ ಪಾದಯಾತ್ರೆ, ಈ ಉಪವಾಸ ಎಂದೆಲ್ಲ ಹೇಳಿ ಸಂಚಲವನ್ನುಂಟುಮಾಡಿದರು. ಮುಂದಿನ ಚುನಾವಣೆ ತಯಾರಿ ವಿಷಯಕ್ಕೆ ಬಂದರೆ ಇತರೆ ಪಕ್ಷಗಳು ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕಿಂತ ನಿಜಕ್ಕೂ ತುಂಬಾ ಹಿಂದೆಬಿದ್ದಿವೆ ಎಂದೇ ಹೇಳಬಹುದು. ಇದರ ಫಲಶ್ರುತಿ ಏನೋ ಆ ಮತದಾರ ಪ್ರಭುವೇ ಬಲ್ಲ.
ಆದರೂ ಶ್ರೀರಾಮುಲು ನಡೆಸಿರುವ ಚುನಾವಣೆ ತಯಾರಿ ಇದೆಯಲ್ಲಾ, ಅದು ನಿಜಕ್ಕೂ ರಾಮುಲು ಸಂಘಟನಾ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ತನ್ಮೂಲಕ, ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ದಿಟ್ಟ ಸಂದೇಶವನ್ನು ರಾಮುಲು ಅದಾಗಲೇ ರವಾನಿಸಿದ್ದಾರೆ.
ಶ್ರೀರಾಮುಲು ದೂರಗಾಮಿ ನಡೆ ಹೇಗಿದೆಯೆಂದರೆ ಆಸಾಮಿ ತಮ್ಮ ಪ್ರಾಬಲ್ಯವಿರುವ ಉತ್ತರ ಕರ್ನಾಟಕದ ಒಂದಷ್ಟು ಜಿಲ್ಲೆಗಳಿಗಾಗಿ ಈಗಾಗಲೇ ತಮ್ಮ ಶಕ್ತಿಯನ್ನು ಧಾರೆಯೆರೆಯಲು ಮುಂದಾಗಿದ್ದಾರೆ. ಮುಂದೆ ಚುನಾವಣೆ ನೀತಿ ಸಂಹಿತೆ ರಗಳೆ ಏಕೆ? ಈಗಿನಿಂದಲೇ ಮತದಾರರನ್ನು ಭದ್ರಪಡಿಸಿಟ್ಟುಕೊಳ್ಳೋಣವೆಂದು ರಾಮುಲು ಅಬ್ಬರದೊಂದಿಗೆ ಪ್ರಚಾರ ಕಾರ್ಯ ಶುರುವಿಟ್ಟುಕೊಂಡು ಯಾವುದೋ ಕಾಲವಾಗಿದೆ.
ಎಷ್ಟೇ ಬೇಗ ಅಂದರೂ ರಾಜ್ಯದಲ್ಲಿ ಚುನಾವಣೆಗಳು ನಡೆಯುವ ವೇಳೆಗೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬೇಸಿಗೆ ಕಾಲಿಟ್ಟಿರುತ್ತದೆ. ಸುಡು ಬೇಸಿಗೆಯಲ್ಲಿ ಮತದಾರರನ್ನು ತಂಪಾಗಿಡಬೇಕು ಎಂದು ಈಗಿನಿಂದಲೇ ಆಲೋಚಿಸಿರುವ ರಾಮುಲು ಆ ಭಾಗದ ಜನರಿಗಾಗಿ ತಂಪೆರೆಯಲು 5 ಲಕ್ಷ ಕೊಡೆಗಳಿಗೆ ಆರ್ಡರ್ ಮಾಡಿದ್ದಾರೆ.
ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ ಕೊಡೆ ಹಿಡಿಯಲು ನಿರ್ಧರಿಸಿರುವ ಶ್ರೀರಾಮುಲು ಎಲ್ಲೆಲ್ಲೂ ತಮ್ಮ ಭಾವಚಿತ್ರವಿರುವ ಕೊಡೆಗಳೇ ರಾರಾಜಿಸಲಿ ಎಂದು ಬಯಸಿದ್ದಾರೆ. ತನ್ಮೂಲಕ ಪರಿಣಾಮಕಾರಿಯಾಗಿ ಮತದಾರನ ಮನಕ್ಕೆ ಲಗ್ಗೆ ಹಾಕಿದ್ದಾರೆ. ರಸ್ತೆ ಬದಿಗಳಲ್ಲೂ ಜನರ ಗಮನ ಸೆಳೆಯುವಂತಾಗಲು ಸಣ್ಣಪುಟ್ಟ ಅಂಗಡಿಯವರಿಗೆ ದೊಡ್ಡ ದೊಡ್ಡ ಛತ್ರಿಗಳನ್ನೂ ವಿತರಿಸಲಿದ್ದಾರೆ.
ಇದೇ ಮಾಸಾಂತ್ಯಕ್ಕೆ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ದೊಡ್ಡ ಪ್ರಮಾಣದಲ್ಲೇ ಛತ್ರಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ಪಕ್ಕದ ದಾವಣಗೆರೆಯಲ್ಲಿ ಇದೇ 6ರಂದು ಅಂಲ್ಪಸಂಖ್ಯಾತರ ಬೃಹತ್ ಸಮಾವೇಶ ನಡೆಸುತ್ತಿದ್ದಾರೆ. ಇದರಲ್ಲಿ ಟಿಪ್ಪು ಸುಲ್ತಾನ್ ಮೊಮ್ಮಗ ಪ್ರಿನ್ಸ್ ಅನ್ವರ್ ಅಲಿ ಷಾ ಭಾಗವಹಿಸುತ್ತಿರುವುದು ವಿಶೇಷವಾಗಿದೆ.












Click it and Unblock the Notifications