ಜೈಲಿನಿಂದ ಅಪ್ಪಣೆ: ನಟಿ ರಕ್ಷಿತಾ ರಾರಾನಗರ ಕ್ಯಾಂಡಿಡೇಟ್

'ತಮ್ಮ ಪಕ್ಷ 164 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರುವುದು ಖಚಿತ' ಎಂದು ಈಗಾಗಲೇ ಹೇಳಿರುವ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧಿನೇತಾ ಶ್ರೀರಾಮುಲು ತಮ್ಮ ಪಕ್ಷದ ಮೊದಲ ಮಹಿಳಾ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ್ದಾರೆ.
ಒಂದು ಕಾಲದಲ್ಲಿ ಯುವ ಸಿನಿಪ್ರೇಮಿಗಳ ಮುದ್ದಿನ ನಟಿಯಾಗಿದ್ದ ರಕ್ಷಿತಾ ತಾವು ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದಿದ್ದಾರೆ. ಕಳೆದ ವಾರ ರಕ್ಷಿತಾ ಇನ್ನೇನು ಶ್ರೀರಾಮುಲು ಅವರಿಂದ ದೂರವಾಗಿ ಪೂಜಾ ಗಾಂಧಿ ಥರ ಯಡಿಯೂರಪ್ಪ ಅವರ ಕೈಹಿಡಿಯಲಿದ್ದಾರೆ ಎಂಬ ಗುಲ್ಲೆದ್ದಿತ್ತು. ಆದರೆ ಅವರೀಗ 'ಬೆಂಗಳೂರು ದಕ್ಷಿಣದ ರಾಜ ರಾಜೇಶ್ವರಿನಗರದ ಕ್ಯಾಂಡಿಡೇಟ್ ತಾವೇ' ಎಂದು ಸ್ವತಃ ಘೋಷಿಸಿದ್ದಾರೆ.
'ಈ ಬಗ್ಗೆ ಬಿಎಸ್‌ಆರ್‌ಸಿ ಮುಖಂಡರೇ ನಿರ್ಧಾರ ಕೈಗೊಂಡಿದ್ದಾರೆ. ಪತಿ ಪ್ರೇಮ್ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ' ಎಂದು ಮೇಡಂ ರಕ್ಷಿತಾ ಹೇಳಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ಅವರ ಪತಿ, ನಿರ್ದೇಶಕ ಪ್ರೇಮ್ ಅವರು 'ರಾಜ್ಯದ ಯಾವುದೇ ಕ್ಷೇತ್ರದಿಂದ ರಕ್ಷಿತಾ ಸ್ಪರ್ಧಿಸಿದರೂ ಅವರ ಪರವಾಗಿ ಪ್ರಚಾರ ನಡೆಸುವುದಾಗಿ' ಹೇಳಿದ್ದಾರೆ.
ಚಂಚಲನಗುಡ ಜೈಲಿನಲ್ಲಿ ಅಪ್ಪಣೆ: ರಕ್ಷಿತಾ ಇಷ್ಟು ಬೇಗ ತಮ್ಮ ಸ್ಪರ್ಧೆಯನ್ನು ಏಕೆ ಬಹಿರಂಗಗೊಳಿಸಿದರು ಎಂದು ನೋಡಿದಾಗ ಶನಿವಾರ ಅವರು ಸೀದಾ ಹೈದರಾಬಾದ್‌ನ ಚಂಚಲನಗುಡ ಜೈಲಿಗೆ ಹೋಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ.
ಮತದಾರನತ್ತ ಹೂನಗೆ: ಅಲ್ಲಿ ಗಾಲಿ ರೆಡ್ಡಿ 'ನೀನೇನಮಾ ನಮ್ಮ ಪಕ್ಷದ ಹುರಿಯಾಳು' ಎಂದು ರಕ್ಷಿತಾರನ್ನು ಹುರಿದುಂಬಿಸಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಹಾರಿಬಂದ ದುಂಬಿ 'ರೆಡ್ಡಿ ನನ್ನನಲ್ಲಿ ಸಾಕಷ್ಟು ಉತ್ಸಾಹ ತುಂಬಿದ್ದಾರೆ. ರೆಡ್ಡಿ ಭೇಟಿ ನನಗೆ ಸಖತ್ ಪ್ರೇರಣೆ ನೀಡಿದೆ. ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ. ಇನ್ನು 15 ದಿನದಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಲಿದೆ. ಅದರಲ್ಲಿ ನನ್ನ ಹೆಸರು ಇರುತ್ತದೆ ನೋಡಿ' ಎಂದು ರಕ್ಷಿತಾ ಮತದಾರರತ್ತ ಹೂನಗೆ ಚೆಲ್ಲಿದ್ದಾರೆ.












Click it and Unblock the Notifications