ಕೆಜೆಪಿ-ಕಾಂಗ್ರೆಸ್ ದೋಸ್ತಿ : ಗೌಡ್ರು ಏನಂದ್ರು

ಕಾಂಗ್ರೆಸ್ ಹಾಗೂ ಕರ್ನಾಟಕ ಜನತಾ ಪಕ್ಷದ ಹೊಂದಾಣಿಕೆ ರಾಜಕೀಯದ ಬಗ್ಗೆ ಸುದ್ದಿ ಹಬ್ಬಿದೆ. ಕೆಜೆಪಿ-ಕಾಂಗ್ರೆಸ್ ಕೈಜೋಡಿಸುವುದರಿಂದ ಜೆಡಿಎಸ್ ಗೆ ಏನು ತೊಂದರೆಯಿಲ್ಲ ಎಂದು ದೇವೇಗೌಡ ಹೇಳಿದ್ದಾರೆ.
ತೃತೀಯ ರಂಗಕ್ಕೆ ಮತ್ತೆ ಪುನಶ್ಚೇತನ ನೀಡುವ ಕಾಲ ಬಂದಿದೆ. ರಾಜ್ಯದಲ್ಲಿ ಜೆಡಿಎಸ್ ಮುಳುಗಿಸಲು ಬಿಜೆಪಿ, ಕಾಂಗ್ರೆಸ್ ಹವಣಿಸುತ್ತಿದೆ. ಈಗ ಈ ಪಟ್ಟಿಗೆ ಕೆಜೆಪಿ ಕೂಡಾ ಸೇರಿದೆ.
ರಾಜ್ಯದ ಜನರ ಸಂಕಷ್ಟಕ್ಕೆ ಪರಿಹಾರ ಸಿಗಬೇಕಾದರೆ ಪ್ರಾದೇಶಿಕ ಪಕ್ಷಗಳಿಂದಲೇ ಮಾತ್ರ ಸಾಧ್ಯ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ತೋರಿರುವ ಮಲತಾಯಿ ಧೋರಣೆ ಜನರ ಕಣ್ಮುಂದೆ ಇದೆ.
ಬಿಜೆಪಿ ಸರ್ಕಾರ ಜನ ವಿರೋಧಿ ಅನುಸರಿಸುತ್ತಾ ಕುರ್ಚಿಗಾಗಿ ಸದಾ ಕಾಲ ಕಿತ್ತಾಡುವುದರಲ್ಲೇ ಕಾಲ ಕಳೆದಿದೆ. ಬಿಜೆಪಿ ಆಂತರಿಕ ಕಿತ್ತಾಟದ ಫಲವಾಗಿ ಕೆಜೆಪಿ ಹುಟ್ಟಿದೆ. ಕರ್ನಾಟಕ ಅಭಿವೃದ್ಧಿಗೆ ಕೆಜೆಪಿ ಉದಯ ಎಂಬುದು ಹಾಸ್ಯಾಸ್ಪದ ಎಂದು ಗೌಡರು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪರ ಜನರು ಮತ ಹಾಕುವ ಮೂಲಕ ಬಿಜೆಪಿಗೆ ತಕ್ಕ ಪಾಠ ನೀಡಲಿದ್ದಾರೆ. ಯುಪಿಎ ಸರ್ಕಾರ ಸಿಬಿಐ ದುರ್ಬಳಕೆ ಮಾಡಿಕೊಂಡು ಯಡಿಯೂರಪ್ಪ ಅವರನ್ನು ಪಾರು ಮಾಡಲು ಯೋಜಿಸಿದೆ.
ಕದ್ದುಮುಚ್ಚಿ ಕೆಜೆಪಿ-ಕಾಂಗ್ರೆಸ್ ಏನೇ ಹೊಂದಾಣಿಕೆ ಮಾಡಿಕೊಂಡರೂ ಜನರ ಮುಂದೆ ಬಹಿರಂಗವಾಗಲೇ ಬೇಕು. ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾಣುತ್ತಿರುವ ಕನಸು ಎಂದಿಗೂ ನನಸಾಗಲು ಬಿಡುವುದಿಲ್ಲ ಎಂದು ದೇವೇಗೌಡ ಎಚ್ಚರಿಸಿದ್ದಾರೆ.
ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡುವತ್ತ ಕಾರ್ಯಕರ್ತರು ಗಮನಹರಿಸಲಿದ್ದಾರೆ. ಜನರ ಒಲವು ನಮ್ಮ ಕಡೆಗೆ ಹರಿಯಲಿದೆ ಎಂದು ದೇವೇಗೌಡ ಹೇಳಿದ್ದಾರೆ.












Click it and Unblock the Notifications