ಹೆತ್ತವರ ವಿರೋಧ, ಪ್ರೇಮಿಗಳು ವಿಷ ಸೇವಿಸಿ ಸಾವು

ನಡೆದಿದೆ.
ಪ್ರೇಮ ವಿವಾಹಕ್ಕೆ ಹೆತ್ತವರು ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಮನನೊಂದ ಪ್ರೇಮಿಗಳು ಮನೆಯ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಶೇಷಾದ್ರಿಪುರದ ವಿ.ವಿ ಗಿರಿ ಕಾಲೋನಿಯ ವಿನೋದ್ ಕುಮಾರ್(26) ಮತ್ತು ಸುಧಾ (28)ಆತ್ಮಹತ್ಯೆಗೆ ಶರಣಾದ ದುರಂತ ಪ್ರೇಮಿಗಳು. ಈ ಇಬ್ಬರು ಒಂದೇ ಬಡವಾಣೆಯಲ್ಲಿ ವಾಸವಾಗಿದ್ದು, ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇಬ್ಬರ ನಡುವೆ ಸ್ನೇಹ ಬೆಳೆದು ಬಳಿಕ ಪ್ರೇಮಾಂಕುರವಾಗಿತ್ತು. ಬಹುದಿನಗಳ ಕಾಲ ಸುತ್ತಾಡಿಕೊಂಡಿದ್ದರು. ಪೋಷಕರನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸಿದ್ದರು.
ಆದರೆ, ಈ ವಿಷಯ ತಿಳಿದ ಎರಡು ಮನೆಯ ಪೋಷಕರು ಪ್ರೇಮ ವಿವಾಹಕ್ಕೆ ಅಡ್ಡಿಪಡಿಸಿ ದೂರವಿರಿಸುವ ಯತ್ನಿಸಿದ್ದರು.
ವಯಸ್ಸು ಅಡ್ಡಿಯಾಯಿತೇ?: ಸುಧಾಳ ತಂದೆ ಮುನಿಸ್ವಾಮಿ ಕ್ಯಾಬ್ ಚಾಲಕರಾಗಿದ್ದು, ವಿನೋದ್ ತಂದೆ ಅಣ್ಣಮಲೈ ಪೈಂಟರ್ ಆಗಿದ್ದಾರೆ. ಎರಡು ಮನೆಯವರಿಗೆ ಸ್ಟೇಟಸ್ ಪ್ರಶ್ನೆ ಇಲ್ಲ. ಇಬ್ಬರ ಮನೆಯವರು ತೀರಾ ಹತ್ತಿರದವರಾಗಿದ್ದು, ಒಂದೇ ಜಾತಿ ಹಾಗೂ ಅಂತಸ್ತಿನವರಾಗಿದ್ದರು.
ಆದರೆ ಸುಧಾ, ವಿನೋದ್‌ಗಿಂತ 2 ವರ್ಷ ದೊಡ್ಡವಳಾಗಿದ್ದಳು ಇದು ಯಾವ ರೀತಿಯಲ್ಲೂ ಮದುವೆಗೆ ಅಡ್ಡವಾಗಿರಲಿಲ್ಲ. ಆದರೂ ಮದುವೆಗೆ ಪಾಲಕರು ನಿರಾಕರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪಾಲಕರ ವರ್ತನೆಯಿಂದ ಬೇಸತ್ತ ಪ್ರೇಮಿಗಳಿಬ್ಬರು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದರು. ಆದರೆ ಪಾಲಕರ ಒಪ್ಪಿಗೆ ಪಡೆದ ನಂತರವೇ ಮದುವೆಯಾಗಬೇಕೆಂಬ ಹಂಬಲದಿಂದ ಶುಕ್ರವಾರ ಮಧ್ಯಾಹ್ನ ಮತ್ತೆ ಮನೆಗೆ ವಾಪಸ್ಸಾಗಿದ್ದರು.
ಆದರೆ ಮನೆಗೆ ಹೋಗುತ್ತಿದ್ದಂತೆ ಕುಟುಂಬದ ಗೌರವ ಮಣ್ಣು ಮಾಡಿದ್ದೀರಿ ಎಂದು ನಿಂದಿಸಿದ ಪೋಷಕರು ಮನೆಯಿಂದ ಹೊರ ಹಾಕಿದರು.
ಇದರಿಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾದ ಪ್ರೇಮಿಗಳು ಬೇರೆ ದಾರಿ ತೋಚದೆ ವಿನೋದ್ ಮನೆ ಮುಂದೆಯೇ ಇಬ್ಬರೂ ವಿಷ ಕುಡಿದಿದ್ದಾರೆ.
ಫುಟ್ ಪಾತ್ ಮೇಲೆ ಬಿದ್ದಿದ್ದ ಈ ಇಬ್ಬರನ್ನು ಕಂಡ ಸ್ಥಳೀಯರು ಮನೆಯವರಿಗೆ ತಿಳಿಸಿ, ಕೂಡಲೇ ವಿನೋದ್‌ನನ್ನು ಕೆ.ಸಿ.ಜನರಲ್ ಆಸ್ಪತ್ರೆ ಮತ್ತು ಸುಧಾಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications