ಕೆಬಿಸಿ: ಆಸಿಡ್ ದಾಳಿಯ ಸೋನಾಲಿಗೆ 25ಲಕ್ಷ ಬಹುಮಾನ
ಮುಂಬೈ,ಡಿ.26: ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರಲ್ಲಾ ಕೌನ್ ಬನೇಗಾ ಕರೋಡ್ ಪತಿ ಅದರಲ್ಲಿ ಮಿಸ್ ಯೂನಿವರ್ಸ್ ಲಾರಾ ದತ್ತಾ ಮೊನ್ನೆ ಪಾಲ್ಗೊಂಡಿದ್ದರು. ಅವರ ಎದುರು ಕುಳಿತಿದ್ದುದು ಲಾರಾಗಿಂತ ಹೆಚ್ಚು ಜನಾಕರ್ಷಿತ ಅಮಿತಾಭ್. ಆದರೆ ಆ ಒಂದು ನಿರ್ದಿಷ್ಟ ಕಾರ್ಯಕ್ರಮವನ್ನು ನೋಡುತ್ತಿದ್ದ ಜನ ಮಾತ್ರ ಅವರಿಬ್ಬರತ್ತಲೂ ಆಕರ್ಷಿತರಾಗಲೇ ಇಲ್ಲ. ಬದಲಿಗೆ ಅಂದಿನ ಅತಿಥಿ ಸೋನಾಲಿ ಅವರತ್ತಲೇ ಗಮನಹರಿಸಿದ್ದರು.
ಏನಪ್ಪಾ ಸೋನಾಲಿಯದು ಅಂತಹ ವಿಶೇಷ ಎನ್ನುವವರಿಗೆ ಇಲ್ಲಿದೆ ಹೆಚ್ಚಿನ ಮಾಹಿತಿ...

ಈ ಸೋನಾಲಿ ಮುಖರ್ಜಿ ಮೂಲತಃ ಜಾರ್ಖಂಡಿನ ಧನಬಾದಿನವಳು. ಆಗಿನ್ನೂ (2003ರಲ್ಲಿ) ಅವಳು ಹದಿನಾರರ ಕುಸುಮಬಾಲೆ. ಪದವಿಗಾಗಿ ಸಮಾಜಶಾಸ್ತ್ರ ಓದುತ್ತಿದ್ದಳು.ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುತ್ತಾ ಅಮ್ಮನ ಮನೆಯಲ್ಲಿ ನಿದ್ರಿಸುತ್ತಿದ್ದವಳ ಮೇಲೆ ವಿದ್ಯಾರ್ಥಿಗಳ ಗುಂಪೊಂದು ಧೋ ಅಂತ ಆಸಿಡ್ ಸುರಿದಿತ್ತು. ಅಷ್ಟೇ... ಅದಾದ ನಂತರ ನಾನಾ ಆಸ್ಪತ್ರೆಗಳ ವಿವಿಧ ವೈದ್ಯರು ಬರೋಬ್ಬರಿ 22 ಬಾರಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಆದರೆ ಅವಳು ಎದೆಗುಂದಿಲ್ಲ. ಈ ಮಧ್ಯೆ, ನಮ್ಮ ನ್ಯಾಯಾಂಗ ಅವಳಿಗಿನ್ನೂ ನ್ಯಾಯ ಒದಗಿಸುವಲ್ಲಿ ಅನ್ಯಾಯವೆಸಗಿದೆ ಎಂದೇ ಹೇಳಬಹುದು. ಹಾಗಾಗಿ, ಅದೊಮ್ಮೆ 'ಜೀವನ ಸಾಕಾಗಿದೆ. ಸಾಯುತ್ತೇನೆ. ಅವಕಾಶ ಕಲ್ಪಸಿ' ಎಂದು ಮೊರೆಯಿಟ್ಟಳು. ಆದರೆ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಅದಕ್ಕೂ ಅವಕಾಶವಿಲ್ಲ. 'ದಯಾಮರಣಕ್ಕೆ ಅವಕಾಶ ಇಲ್ವಮ್ಮಾ' ಎಂದು ಗೋಣುಚೆಲ್ಲಿತು.
'ನನಗಾದ ಗಾಯಕ್ಕೆ ಇದು ಅತ್ಯುತ್ತಮ ಔಷಧ': ಆದರೆ ಒಬ್ಬ ಅಮಿತಾಭ್ ತಾನು ನಡೆಸಿಕೊಡುವ ಕೆಬಿಸಿ ಮೂಲಕ ಇಡೀ ದೇಶವೇ ನೋಡುತ್ತಿದ್ದಂತೆ ಅವಳಿಗೆ 25 ಲಕ್ಷ ರೂ. ಗಳ ಬಹುಮಾನವನ್ನು ದಕ್ಕಿಸಿ, ಅರ್ಹ ನ್ಯಾಯವನ್ನೊದಗಿಸಿದ್ದಾರೆ. 'ನನಗಾದ ಗಾಯಕ್ಕೆ ಇದು ಅತ್ಯುತ್ತಮ ಔಷಧ' ಎಂದು ಸೋನಾಲಿಯೂ ಕೆಬಿಸಿಯಲ್ಲಿ ಜಯಶಾಲಿಯಾಗಿದ್ದಕ್ಕೆ ಪ್ರತಿಕ್ರಿಯಿಸಿದ್ದಾಳೆ.
ಅಮಿತಾಭ್ ರಿಂದ 25 ಲಕ್ಷ ರೂ ಚೆಕ್ ಸ್ವೀಕರಿಸುತ್ತಿದ್ದಂತೆ ಆಸಿಡ್ ದಾಳಿಯಿಂದ ಅರೆಗುರುಡು ಮತ್ತು ಶ್ರವಣಶಕ್ತಿ ಕಳೆದುಕೊಂಡಿರುವ ಸೋನಾಲಿಗೆ ಕೋಟ್ಯಂತರ ಜನರ ಚಪ್ಪಾಳೆ ಮತ್ತು ಮೆಚ್ಚುಗೆಯ ನೋಟ ಖಂಡಿತ ಕಣ್ಣಿಗೆ ಕಟ್ಟಿರುತ್ತದೆ. ಇದೇ ವೇಳೆ, ಕೇವಲ ನಾಲ್ಕು ತಿಂಗಳ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದು ರಾಜಾರೋಷವಾಗಿ ತಿರುಗಾಡಿಕೊಂಡಿರುವ ಆ ಆಸಿಡ್ ದಾಳಿಕೋರರಿಗೆ ಅಮಿತಾಭ್ ಅವರ ಒಂದೊಂದು ಮಾತೂ ಭರ್ಜಿಯಂತೆ ನಾಟಿರಲೂ ಸಾಕು.












Click it and Unblock the Notifications