ರಾಜೀನಾಮೆಗೆ ಕೆಎಸ್ ಈಶ್ವರಪ್ಪ ಮೂರು ನಾಮ

'ನಾನ್ಯಾಕ್ರೀ ರಾಜೀನಾಮೆ ನೀಡಬೇಕು? ಮಾಡಿರುವುದು ಆರೋಪವಷ್ಟೆ. ಆರೋಪ ಸಾಬೀತಾಗಲಿ, ರಾಜೀನಾಮೆ ಅಷ್ಟೇ ಏಕೆ ರಾಜಕೀಯದಿಂದಲೇ ಸನ್ಯಾಸ ತೆಗೆದುಕೊಳ್ಳುತ್ತೇನೆ' ಎಂದು ನುಡಿಯುವ ಭಂಡರೇ ರಾಜಕೀಯದಲ್ಲಿ ತುಂಬಿಕೊಂಡಿದ್ದಾರೆ. ವಿರೋಧಿಗಳು ರಾಜೀನಾಮೆಗೆ ಒತ್ತಾಯಿಸುತ್ತಾ ಇರುತ್ತಾರೆ, ಆರೋಪ ಹೊತ್ತವರು ಮತ್ತು ಅವರ ಬೆಂಬಲಿಗರು ಅಲ್ಲಗಳೆಯುತ್ತಲೇ ಇರುತ್ತಾರೆ.
ಪ್ರಸಕ್ತ ರಾಜಕೀಯದಲ್ಲಿ ಬಿಜೆಪಿಯ ಎಸ್ ಸುರೇಶ್ ಕುಮಾರ್ ಅವರನ್ನು ಹೊರತುಪಡಿಸಿದರೆ, ಸಾಲುಸಾಲು ಹಗರಣಗಳಲ್ಲಿ ಭಾಗಿಯಾಗಿರುವ ಯಾವ ರಾಜಕಾರಣಿಯೂ, ತಾವು ಮಾಡಿದ ಹಗರಣಕ್ಕೆ ನಾಚಿಕೆಪಟ್ಟುಕೊಂಡು ರಾಜೀನಾಮೆಗೆ ಮುಂದಾಗಿಲ್ಲ. ರಾಜೀನಾಮೆ ನೀಡುವುದು ಅತ್ಲಾಗಿರಲಿ, ರಾಜೀನಾಮೆ ಕೊಡಿ ಎಂದು ಎಲ್ಲೆಡೆಯಿಂದ ಒತ್ತಾಯ ಬಂದರೂ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಲ್ಲ.
ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೆಐಎಡಿಬಿ ಹಗರಣದಲ್ಲಿ ಮುಳುಗಿದ ಕಟ್ಟಾ ಸುಬ್ರಮಣ್ಯ ನಾಯ್ಡು, ಅತ್ಯಾಚಾರ ಹಗರಣದಲ್ಲಿ ಸಿಲುಕಿದ ಹರತಾಳು ಹಾಲಪ್ಪ, ಡಿನೋಟಿಫಿಕೇಷನ್ ಹಗರಣದಲ್ಲಿ ಧೂಳು ಮೆತ್ತಿಕೊಂಡಿರುವ ವಿ. ಸೋಮಣ್ಣ, ಆಸ್ತಿ ಲಪಟಾಯಿಸಿದ ಆರೋಪ ಹೊತ್ತಿರುವ ಸಿ.ಟಿ. ರವಿ, ಭೂ ಅಕ್ರಮ ಆರೋಪ ಎದುರಿಸುತ್ತಿರುವ ರಾಮದಾಸ್, ಆರ್ ಅಶೋಕ್ ಮತ್ತು ಡಿ.ವಿ. ಸದಾನಂದ ಗೌಡ. ಇನ್ನು ನೀಲಿ ಚಿತ್ರ ನೋಡಿ ಸಿಕ್ಕುಬಿದ್ದವರನ್ನು ಮರೆಯುವಂತೆಯೇ ಇಲ್ಲ.
ಈಗ ಕರ್ನಾಟಕ ಸರಕಾರದ ಉಪ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ, ಪ್ರಭಾವಶಾಲಿ ರಾಜಕಾರಣಿ ಕೆಎಸ್ ಈಶ್ವರಪ್ಪ ಕೂಡ ಅವರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಇವರೆಲ್ಲ ಜನರಿಂದ ಚುನಾಯಿತವಾದ ಸರಕಾರದ ಚುಕ್ಕಾಣಿ ಹಿಡಿದವರು. ಮತ ಹಾಕಿದ ಜನರಿಗೆ ಲೆಕ್ಕಪತ್ರ ಒಪ್ಪಿಸಬೇಕಾದವರು. ಬೇಕಾದ್ರೆ ಜೈಲಿಗೆ ಹೋಗೋಕೂ ಸಿದ್ಧ, ಆದ್ರೆ ಕುರ್ಚಿಯನ್ನು ಬಿಟ್ಟು ಅಲುಗಾಡುವುದಿಲ್ಲ ಎಂದು ಗಟ್ಟಿಯಾಗಿ ಕುಳಿತವರು. ಕನಿಷ್ಠಪಕ್ಷ ಉಪ ಮುಖ್ಯಮಂತ್ರಿ ಹುದ್ದೆಗೆ ಮರ್ಯಾದೆ ಕೊಡಲಿಕ್ಕಾದರೂ ಈಶ್ವರಪ್ಪ ರಾಜೀನಾಮೆ ನೀಡಬೇಕು. ನೀಡುತ್ತಾರಾ?
ಬಿಜೆಪಿಯವರನ್ನು ಅಷ್ಟೇ ಏಕೆ ದೂರುವುದು? ನೈಸ್ ಹಗರಣದಲ್ಲಿ, ಡಿನೋಟಿಫಿಕೇಷನ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರಂ ಸಿಂಗ್, ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕಾಂಗ್ರೆಸ್‌ನ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ಪಕ್ಷಗಳ ಅನೇಕ ರಾಜಕಾರಣಿಗಳು ಆರೋಪಗಳನ್ನು ಎದುರಿಸುತ್ತಿರುವವರೆ. ನಾಟ್ ಟು ಫಾರ್ಗೆಟ್ ರೆಡ್ಡಿ ಬ್ರದರ್ಸ್. ಒಬ್ಬರು ಇನ್ನೊಬ್ಬರ ಮೇಲೆ ಬೆರಳು ತೋರುವಂತೆಯೇ ಇಲ್ಲ.
ವಿಪರ್ಯಾಸದ ಸಂಗತಿಯೆಂದರೆ, ಇಂಥ ಆರೋಪಿಗಳ ರಾಜೀನಾಮೆಯನ್ನು ಅವರ ಬಗಲಿನಲ್ಲಿರುವ ರಾಜಕಾರಣಿಗಳು ಕೇಳಿದರೇ ಕೊಡುವುದಿಲ್ಲವೆಂದ ಮೇಲೆ ಮತಹಾಕಿದ ಪ್ರಭುಗಳು ಕೇಳಿದರೆ ಕೊಟ್ಟಾರೆಯೆ? ಇಂಥ ರಾಜಕಾರಣಿಗಳನ್ನು ಛೀಮಾರಿ ಹಾಕಿ ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ ನಮ್ಮ ಸಾಮಾನ್ಯ ಜನರಿಗೆ ಇಲ್ಲವೇ ಇಲ್ಲ. ಅವರಿಗಿರುವುದು ಒಂದೇ ಅಧಿಕಾರ, ಅದು ಇಂಥವರಿಗೆ ಪೆಕ್ರನಂತೆ ಮತ ಹಾಕುವುದು ಅಷ್ಟೆ. ಈಗ ಮತಹಾಕಿದ ಪ್ರಜ್ಞಾವಂತ ಮತದಾರರೇ ಹೇಳಲಿ ಏನು ಮಾಡಬೇಕೆಂದು.












Click it and Unblock the Notifications