ರಾಮಕೃಷ್ಣ ಹೆಗ್ಡೆ, ದೇವೇಗೌಡ ಅಣ್ಣತಮ್ಮಂದಿರು, ಎಚ್ಡಿಕೆ

ರಾಮಕೃಷ್ಣ ಹೆಗಡೆ ಹತ್ತಿರದ ಸಂಬಂಧಿ ಶಶಿಭೂಷಣ್ ಹೆಗ್ಡೆ ಜೆಡಿಎಸ್ ಸೇರ್ಪಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ರಾಮಕೃಷ್ಣ ಹೆಗ್ಡೆ ಅವರ ಆದರ್ಶವನ್ನು ಜೆಡಿಎಸ್ ಇನ್ನೂ ಪಾಲಿಸುತ್ತಿದೆ. ಉತ್ತಮ ಸ್ನೇಹಿತರು, ಅಣ್ಣತಮ್ಮಂದಿರಂತೆ ಇದ್ದ ಹೆಗ್ಡೆ ಮತ್ತು ದೇವೇಗೌಡರ ನಡುವೆ ರಾಷ್ಟ್ರೀಯ ನಾಯಕರೂ ಸೇರಿದಂತೆ ಕೆಲವರು ದ್ವೇಷದ ಬೀಜವನ್ನು ಬಿತ್ತಲು ತಕ್ಕಮಟ್ಟಿಗೆ ಯಶಸ್ವಿಯಾದರು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಜೆಡಿಎಸ್ ಈ ಬಾರಿ ಏಕಾಂಗಿಯಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಸೂಕ್ತ ಅಭ್ಯರ್ಥಿ ಆಯ್ಕೆ ಸಂಬಂಧ ಕಾರ್ಯಕರ್ತರ ನಡುವೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು ನಾನು, ರಾಜ್ಯದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇಪ್ಪತ್ತು ತಿಂಗಳು ಮುಖ್ಯಮಂತ್ರಿಯಾಗಿ ಜನಮೆಚ್ಚುವ ಕೆಲಸವನ್ನು ಮಾಡಿದ್ದೇನೆ. ಸ್ವತಂತ್ರವಾಗಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ನಿಮ್ಮ ಸಹಕಾರ ಬೇಕು, ಕುಮಾರಸ್ವಾಮಿ ನಿಮ್ಮ ಮನೆಮಗ ಇದ್ದಂತೆ ನನ್ನನ್ನು ಪ್ರೋತ್ಸಾಹಿಸಿ, ಆಶೀರ್ವದಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಬಣ್ಣದ ಮಾತಿಗೆ ಮರುಳಾಗಬೇಡಿ. ಕಾಂಗ್ರೆಸ್ ಮತ್ತು ಬಿಜೆಪಿ ಪೂರ್ಣಾವಧಿಯಲ್ಲಿ ಆಳಿ ರಾಜ್ಯವನ್ನು ಯಾವ ದುಸ್ಥಿತಿಗೆ ತಂದಿದೆ ಎನ್ನುವುದನ್ನು ಅರಿತಿದ್ದೀರಿ. ನಮ್ಮ ಪಕ್ಷಕ್ಕೆ ಬಹುಮತ ನೀಡಿ ಅಧಿಕಾರ ನಡೆಸುವ ಒಂದು ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಸಿದ್ದಾಪುರದ ಜನತೆಯಲ್ಲಿ ಕೇಳಿಕೊಂಡಿದ್ದಾರೆ.
ಯಡಿಯೂರಪ್ಪ ರಾಜ್ಯವನ್ನು ಲೂಟಿ ಮಾಡಿದಷ್ಟು ಇನ್ಯಾರು ಮಾಡಲು ಸಾಧ್ಯವಿಲ್ಲ. ಬಿಜೆಪಿ ಬಿಟ್ಟು ಹೊಸ ಪಕ್ಷ ಕಟ್ಟಿದ್ದಾರೆ. ರಾಜ್ಯವನ್ನು ಇನ್ನೇನು ಮಾಡಲು ಹೊರಟಿದ್ದಾರೋ ದೇವರೇ ಬಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications