ಪಟೇಲ್‌ಗೆ ಆದ ಗತಿ ಯಡಿಯೂರಪ್ಪಗೂ ಆಗುವುದಾ?

ನರೇಂದ್ರ ಮೋದಿ ಗೆಲುವು ಕರ್ನಾಟಕ ರಾಜಕೀಯದ ಮೇಲೆ, ಭಾರತೀಯ ಜನತಾ ಪಕ್ಷದ ಮೇಲೆ ಯಾವ ರೀತಿ ಪ್ರಭಾವ ಬೀಳಲಿದೆ ಎಂದು ಲೆಕ್ಕಾಚಾರ ಹಾಕಲು ರಾಜಕೀಯ ಪಂಡಿತರು ಶುರು ಮಾಡಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಗುಜರಾತ್ ಪರಿಸ್ಥಿತಿ ಅನೇಕ ಸಾಮ್ಯತೆಗಳನ್ನು ಮತ್ತು ಕೆಲ ಭಿನ್ನತೆಗಳನ್ನು ಹೊಂದಿವೆ.
ಗುಜರಾತ್‌ನಲ್ಲಿ ಬಿಜೆಪಿಯಿಂದ ಸಿಡಿದು ಹೋಗಿ, ನರೇಂದ್ರ ಮೋದಿಗೆ ಸೆಡ್ಡು ಹೊಡೆದು, ಗುಜರಾತ್ ಪರಿವರ್ತನ ಪಾರ್ಟಿ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಮಣ್ಣು ಮುಕ್ಕಿರುವುದು ರಾಜ್ಯದ ರಾಜಕೀಯದ ಮುಂದಿನ ರಾಜಕೀಯ ಬೆಳವಣಿಗೆಗೆ ಯಾವ ರೀತಿಯ ಸೂಚನೆ ನೀಡಿದೆ ಎಂಬ ಬಗ್ಗೆಯೂ ತರ್ಕ ಕುತರ್ಕಗಳು ನಡೆದಿವೆ.
ಕರ್ನಾಟಕದ ಪರಿಸ್ಥಿತಿ ಕೂಡ ಭಿನ್ನಮತಕ್ಕೆ ಸಂಬಂಧಿಸಿದಂತೆ ಭಿನ್ನವಾಗೇನೂ ಇಲ್ಲ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಕೂಡ ಬಿಜೆಪಿಯಿಂದ ಸಿಡಿದು, ಹೊಸ ಪಕ್ಷ ಕರ್ನಾಟಕ ಜನತಾ ಪಕ್ಷ ಕಟ್ಟಿ, ಇಡೀ ಬಿಜೆಪಿ ನಾಯಕತ್ವಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ. ಅವರಿಗೆ ಕೂಡ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೇಶುಭಾಯಿ ಪಟೇಲ್ ಅವರಿಗಾದ ಸೋಲು ಆಗುತ್ತದಾ? ಕಾಲವೇ ಉತ್ತರಿಸಲಿದೆ.
ಕೇಶುಭಾಯಿ ಜಯಭೇರಿ ಬಾರಿಸಿದ್ದಾರೆ. ಆದರೆ, ಅವರ ಪಕ್ಷ ಮಣ್ಣು ಮುಕ್ಕಿದೆ. ಅವರು ಕಾಂಗ್ರೆಸ್ ಜೊತೆ ಮಾಡಿಕೊಂಡಿದ್ದ ಸಖ್ಯ ಕೂಡ ಕಾಂಗ್ರೆಸ್ ಮತ್ತು ಅವರ ಪಕ್ಷದ ನೆರವಿಗೆ ಬರಲಿಲ್ಲ. ಬದಲಾಗಿ ಕಳೆದ ಬಾರಿಗಿಂತಲೂ ನರೇಂದ್ರ ಮೋದಿ ಹೆಚ್ಚು ಸ್ಥಾನ ಪಡೆಯುವ ದಿಕ್ಕಿನಲ್ಲಿ ಸಾಗಿದ್ದಾರೆ. ಕರ್ನಾಟಕದಲ್ಲಿ ಕೂಡ ಯಡಿಯೂರಪ್ಪನವರ ಕೆಜೆಪಿ ಪಕ್ಷ ಕಾಂಗ್ರೆಸ್ ಜೊತೆ ಪರೋಕ್ಷವಾಗಿ ಸಂಧಾನ ಮಾಡಿಕೊಂಡಿರುವುದು ಗುಟ್ಟಾಗೇನು ಉಳಿದಿಲ್ಲ. ಶೆಟ್ಟರ್ ಸರಕಾರ ಉರುಳಿಸಲು ನಿಮ್ಮ ಜೊತೆ ಕೈಜೋಡಿಸಲು ಸಿದ್ಧ ಎಂದು ಕಾಂಗ್ರೆಸ್ಸಿಗೆ ಬಿಎಸ್‌ವೈ ವಾಗ್ದಾನ ನೀಡಿದ್ದಾರೆ.
ಇನ್ನೊಂದು ದಿಕ್ಕಿನಿಂದ ನೋಡಿದರೆ, ಗುಜರಾತ್ ಮತ್ತು ಕರ್ನಾಟಕದ ಬಿಜೆಪಿಯಲ್ಲಿನ ಪರಿಸ್ಥಿತಿ ತೀರ ಭಿನ್ನವಾಗಿದೆ. ಗುಜರಾತಿಗೆ ಮತ್ತು ಅಲ್ಲಿನ ಬಿಜೆಪಿಗೆ ನರೇಂದ್ರ ಮೋದಿ ಅನಭಿಷಿಕ್ತ ದೊರೆ. ಯಾರೂ ಅವರ ನಾಯಕತ್ವವನ್ನು ಪ್ರಶ್ನಿಸುವುದಿಲ್ಲ. ಆದರೆ, ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಅಂತಹ ಯಾವ ನಾಯಕರಿದ್ದಾರೆ? ಕೆಎಸ್ ಈಶ್ವರಪ್ಪ? ಜಗದೀಶ್ ಶೆಟ್ಟರ್? ಡಿವಿ ಸದಾನಂದ ಗೌಡ? ಅನಂತ್ ಕುಮಾರ್? ಉತ್ತರ ಎಲ್ಲರಿಗೂ ಗೊತ್ತಿದೆ.
ಗುಜರಾತಿನಲ್ಲಿ ಕೇಶುಭಾಯಿ ಪಟೇಲ್ ಜಾತಿ ಆಧಾರದ ಮೇಲೆ ಕನಿಷ್ಠಪಕ್ಷ 20 ಸ್ಥಾನಗಳನ್ನು ಗಳಿಸುತ್ತಾರೆ ಎಂದು ಎಲ್ಲರೂ ಲೆಕ್ಕ ಹಾಕಿದ್ದರು. ಕರ್ನಾಟಕದಲ್ಲಿ ಕೂಡ ಯಡಿಯೂರಪ್ಪ ಜಾತಿ ಲೆಕ್ಕಾಚಾರದ ಮೇಲೆಯೇ ತಮ್ಮ ಗೆಲುವಿನ ಕನಸು ಕಾಣುತ್ತಿದ್ದಾರೆ. ಲಿಂಗಾಯಿತರೆಲ್ಲರ ಮತ ತಮಗೇ ಎಂದು ಬೀಗುತ್ತಿರುವ ಯಡಿಯೂರಪ್ಪ, ಮುಸ್ಲಿಂ ವೋಟುಗಳನ್ನು ಕೀಳಲು ನಾನಾ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಯಾವುದೇ ರಣತಂತ್ರ ರೂಪಿಸುವತ್ತ ಕಣ್ಣು ಹಾಯಿಸಿದಂತೆ ಕಾಣಿಸುತ್ತಿಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಆಡಳಿತವೇ ತಮಗೆ ಮಾದರಿ ಎಂದು ಸಾರಿದ್ದರು. ಅಂತಹ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ ಕೂಡ. ಅಂತಹ ಅಭಿವೃದ್ಧಿ ಕಾರ್ಯ ಕರ್ನಾಟಕದಲ್ಲಿ ಆಗಿದೆಯಾ? ಮೋದಿಯಂತಹ ವರ್ಚಸ್ಸನ್ನು ಬಿಜೆಪಿ ಅಷ್ಟೇ ಏಕೆ, ಕೆಜೆಪಿ, ಜೆಡಿಎಸ್, ಕಾಂಗ್ರೆಸ್‌ನಲ್ಲಿ ಯಾರಾದರೂ ಹೊಂದಿದ್ದಾರಾ? ಈ ಪ್ರಶ್ನೆಗಳಿಗೂ ಉತ್ತರ ಸರಳ.
ಸದ್ಯಕ್ಕೆ ಎಲ್ಲವೂ ಮತದಾರರ ಕೈಯಲ್ಲಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷಗಳ ನಡುವೆ ಜಿದ್ದಾಜಿದ್ದಿ ಹೊಡೆದಾಟ ನಡೆಯಲಿದೆ. ಪಕ್ಷವನ್ನು ಕಡೆಗಣಿಸಿ ವ್ಯಕ್ತಿ ಆಧಾರದ ಮೇಲೆ ಮತದಾರ ಮತ ಹಾಕಿದರೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲಿಕ್ಕಿಲ್ಲ. ಬದಲಾಗಿ, ವ್ಯಕ್ತಿಯ ವರ್ಚಸ್ಸಿನ ಬದಲು ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಮತದಾರ ಮತ ಹಾಕಿದರೆ ಫಲಿತಾಂಶ ಭಿನ್ನವಾಗಿರಲು ಸಾಧ್ಯ. ಆದರೆ, ಮತದಾರನ ಒಲವು ಯಾವ ಕಡೆ ಇದೆ ಎಂಬುದನ್ನು ಬಲ್ಲವರು ಯಾರು?
ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಕೂಡ ಹಣ, ಹೆಂಡ, ಸೀರೆ ಮೇಲಾಟ ನಡೆಸಿದರೆ, ಗುಜರಾತ್ ಜೊತೆಗೆ ಕರ್ನಾಟಕವನ್ನು ಹೋಲಿಸಲಾಗದಂತಹ ಫಲಿತಾಂಶ ಬರುವುದು ಖಚಿತ.












Click it and Unblock the Notifications