ಮುಂದಿನ ಸರಕಾರಕ್ಕೆ ಯಡಿಯೂರಪ್ಪ ಕಿಂಗ್ ಮೇಕರ್!

ರಾಜಕೀಯವನ್ನು ಅರಿದು ಕುಡಿದವನಂತೆ ಕರಾರುವಕ್ಕಾಗಿ ಮಾತನಾಡುತ್ತಿದ್ದ ಈತನ ಪ್ರಕಾರ, ರಾಜ್ಯದ ಇತಿಹಾಸದಲ್ಲೇ ಈ ಬಾರಿಯ ಚುನಾವಣೆಯಲ್ಲಿ ಅತಿಯಾದ ಹಿಂಸೆ ಮತ್ತು ಹಣದ ಹೊಳೆಯೇ ಹರಿಯಲಿದೆ.
ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸಲಿದ್ದಾರೆ. ಹಣ, ಹೆಂಡ ಹಂಚಲು ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದು ನಾ..ಮುಂದು..ತಾ...ಮುಂದೆಂದು ಮತದಾರರ ಹಿಂದೆ ಬೀಳಲಿವೆ. ಹಣ, ಹೆಂಡಕ್ಕಾಗಿ ಮತ ಚಲಾಯಿಸುವ ಮತದಾರರಿಗಂತೂ ಈ ಬಾರಿಯ ಚುನಾವಣೆ ಹಬ್ಬವೋ ಹಬ್ಬ.
ಹೊಸದಾಗಿ ಉದಯವಾಗಿರುವ ಯಡಿಯೂರಪ್ಪನವರ ಕೆಜೆಪಿ ಮತ್ತು ಶ್ರೀರಾಮುಲು ಅವರ ಬಿಎಸಾರ್ ಕಾಂಗ್ರೆಸ್ ಪಕ್ಷ ಕೂಡಾ ಇತರ ರಾಜಕೀಯ ಪಕ್ಷಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಯಡಿಯೂರಪ್ಪನವರ ಬಳಿ ದುಡ್ದೇನು ಕಮ್ಮಿಯಿದೆಯಾ? ಸಾವಿರ ಕೋಟಿ ರೂಪಾಯಿ ಮೇಲೆ ಇದೆ ಸ್ವಾಮಿ. ಒಂದೊಂದು ಕ್ಷೇತ್ರದಲ್ಲಿ ಐದೈದು ಕೋಟಿ ಖರ್ಚು ಮಾಡೋಕೆ ರೆಡಿ ಇದ್ದಾರೆ. ಮಠದ ಸ್ವಾಮಿಗಳು ಅವರ ಕೈ ಬಿಡೋಲ್ಲಾ ಎನ್ನುವುದು ಆಟೋಚಾಲಕನ ಅಭಿಪ್ರಾಯ.
ಆದರೂ ಏನೇ ಹೇಳಿ ಸಾರ್, ಯಡಿಯೂರಪ್ಪನವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಪಕ್ಷದ ಅಧ್ಯಕ್ಷರಿಗೊಂದು ಕಾನೂನು ಇವರಿಗೊಂದು ಕಾನೂನು. ನೋಡ್ತಾ ಇರಿ ಸಾರ್, ಬಿಜೆಪಿ ಬೋರ್ಡಿಗೆ ಇಲ್ಲದಂತೆ ಧೂಳೀಪಟವಾಗುತ್ತೆ. ಅದೇ ಯಡಿಯೂರಪ್ಪನವರಿಗೆ ಕೂಡಾ ಬೇಕಾಗಿರುವುದು ಎನ್ನುತ್ತಾನೆ ಆಟೋಚಾಲಕ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಇದ್ದವು, ಆದರೆ ಅಡುಗೆ ಅನಿಲ, ಚಿಲ್ಲರೆ ವಿಷಯದಿಂದ ಹೆಸರು ಹಾಳ್ ಮಾಡ್ಕೊಂಡ್ರು. ಸಿದ್ರಾಮಣ್ಣ ಬಿಟ್ಟರೆ ಪಕ್ಷದಲ್ಲಿ ಇನ್ನೊಬ್ರು ಒಳ್ಳೆ ಲೀಡರ್ ಇಲ್ಲ. ಎಸ್ ಎಂ ಕೃಷ್ಣ ಏನಾದರೂ ಬಂದರೆ ಒಂದು ಚಾನ್ಸ್ ಇದೆ, ಇಲ್ಲಾಂದ್ರೆ ಅವರಿಗೂ ಫುಲ್ ಮೆಜಾರಿಟಿ ಸಿಗೋಲ್ಲಾ.
ಬ್ರಾಹ್ಮಣರು, ಲಿಂಗಾಯಿತ ವೋಟುಗಳೇ ಬಿಜೆಪಿಗೆ ಮುಖ್ಯವಾಗಿತ್ತು. ಆ ಮತ ಬ್ಯಾಂಕಿಗೆ ಯಡಿಯೂರಪ್ಪ ಲಗ್ಗೆ ಇಟ್ಟರು. ಯಡಿಯೂರಪ್ಪ ಬಿಜೆಪಿ ವೋಟಿಗೆ ಹೆಂಗೆ ಬತ್ತಿ ಇಕ್ತಾರೆ ನೋಡಿ. ಬಳ್ಳಾರಿ, ಗದಗ, ರಾಯಚೂರಿನಲ್ಲಿ ರಾಮುಲು ಪಕ್ಷದ ಎದುರು ಬಿಜೆಪಿ ಮತ್ತು ಕಾಂಗ್ರೆಸ್ ಮಂಡಿಯೂರುತ್ತೆ.
ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಲೆಕ್ಕಕಿಲ್ಲ. ಅವರದ್ದು ಏನಿದ್ದರೂ ಒಕ್ಕಲಿಗ ಮತ್ತು ಮುಸ್ಲಿಂ ವೋಟುಗಳು. ಹಳೇ ಮೈಸೂರು ಭಾಗದಲ್ಲಿ ಮಾತ್ರ ಅವರು ಸ್ಟ್ರಾಂಗ್.
ಈ ಬಾರಿಯ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗೋಲ್ಲಾ ಸ್ವಾಮಿ. ಒಂದಾ ಕಾಂಗ್ರೆಸ್ ಜೊತೆ ಯಡಿಯೂರಪ್ಪ ಕೈಜೋಡಿಸುತ್ತಾರೆ. ಇಲ್ಲಾಂದ್ರೆ ಕುಮಾರಸ್ವಾಮಿ, ಯಡಿಯೂರಪ್ಪ, ರಾಮುಲು ಸೇರಿ ಸರಕಾರ ರಚಿಸುತ್ತಾರೆ.
ಯಡಿಯೂರಪ್ಪ ಅವರ ಪಕ್ಷಕ್ಕೆ ಅಧಿಕಾರಕ್ಕೆ ಬರುವಷ್ಟು ಸೀಟು ಸಿಗೋಲ್ಲಾ. ಅವರ ಮುಖ್ಯ ಉದ್ದೇಶ ಬಿಜೆಪಿ ಬರಬಾರದು ಅಷ್ಟೇ.
ಒಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರೇ 'ಕಿಂಗ್ ಮೇಕರ್' ಎನ್ನುವುದು ಆಟೋಚಾಲಕನ ಅಭಿಪ್ರಾಯ. ನೀವೇನಂತೀರಿ ?












Click it and Unblock the Notifications