ಕೆಪಿಸಿಸಿಯಲ್ಲಿ ಬಿಜೆಪಿ ಕೌಂಟ್ ಡೌನ್ ಕ್ಯಾಲೆಂಡರ್

ನನ್ನ ಬೆಂಬಲಿಗರ ವಿರುದ್ಧ ಕ್ರಮ ತೆಗೆದುಕೊಂಡರೆ 24 ಗಂಟೆಗಳಲ್ಲಿ ಸರಕಾರ ಉರುಳಿಸುತ್ತೇನೆ ಎಂದು ಶಪಥ ಮಾಡಿದ್ದ ಮಾಜಿ ಮುಖ್ಯಮಂತ್ರಿ, ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಕೂಡ, ತಮ್ಮ ಆತ್ಮೀರಲ್ಲಿಬ್ಬರಾದ ಬಿ.ಜೆ. ಪುಟ್ಟಸ್ವಾಮಿ ಮತ್ತು ತುಮಕೂರು ಸಂಸದ ಜಿ.ಎಸ್. ಬಸವರಾಜ್ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೂ ಇನ್ನೂ ಸುಮ್ಮನಿದ್ದಾರೆ.
ಇಂದಾದರೂ ಸರಕಾರ ಬೀಳಲಿ, ನಾಳೆಯಾದರೂ ಬೀಳಲಿ ಇನ್ನು 158 ದಿನಗಳಲ್ಲಿ ಬಿಜೆಪಿ ಸರಕಾರ ಹೋಗುವುದು ಖಚಿತ ಎಂದರಿತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲೇ ಕೌಂಟ್ ಡೌನ್ ಕ್ಯಾಲೆಂಡರ್ ಹಾಕಿ ಮುಂದಿನ ಸಿದ್ಧತೆಯಲ್ಲಿ ತೊಡಗಿದ್ದಾರೆ.
158ರಿಂದ ಪ್ರಾರಂಭವಾಗಿರುವ ಕ್ಯಾಲೆಂಡರ್ ಹಾಳೆಗಳು ದಿನಕ್ಕೊಂದು ಉದುರುತ್ತಾ ಹೋಗುತ್ತವೆ. ಬಿಜೆಪಿ ಸರಕಾರ ಬಿದ್ದ ದಿನ ಅಥವಾ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದ ದಿನ ಕ್ಯಾಲೆಂಡರ್ ಅಲ್ಲಿಂದ ಮಾಯವಾಗಿರುತ್ತದೆ. ಕಾಂಗ್ರೆಸ್ ಪಕ್ಷ ಮಾತ್ರ ಮುಂದಿನ ಸರಕಾರ ನಮ್ಮದೆ ಎಂಬ ಉತ್ಸಾಹದಿಂದ ಸಮರ ಸಿದ್ಧತೆಯಲ್ಲಿ ತೊಡಗಿದೆ.
ಈ ನಡುವೆ, ತಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದರಿಂದ, ಮುಖ್ಯಮಂತ್ರಿ ಹುದ್ದೆ ರೇಸಿನಿಂದ ಒಬ್ಬರು ಬದಿಗೆ ಸರಿದಂತಾಗಿದೆ. ಖರ್ಗೆ ಬದಿಗೆ ಸರಿದರೂ ಇನ್ನೂ ಅರ್ಧ ಡಜನ್ ನಾಯಕರು ಅವಕಾಶ ಸಿಕ್ಕರೆ ಅಥವಾ ಕೊಟ್ಟರೆ ತಾವೂ ಮುಖ್ಯಮಂತ್ರಿ ಪದವಿ ಏರಲು ಸಿದ್ಧ ಎಂದು ಸಾರಿದ್ದಾರೆ. ಅವರಲ್ಲಿ ಪ್ರಮುಖರು, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಪರಮೇಶ್ವರ್, ಡಿಕೆ ಶಿವಕುಮಾರ್, ಎಚ್ ವಿಶ್ವನಾಥ್ ಎಟ್ಸಿಟ್ರಾ ಎಟ್ಸಿಟ್ರಾ.
ಬಿಜೆಪಿ ಸರಕಾರ ತೊಲಗುವುದನ್ನೇ ಕಾಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಡಿಯೂರಪ್ಪನವರ ಕೆಜೆಪಿಯಿಂದ ವಾಗ್ದಾನದಿಂದ ಬಲ ಬಂದಂತಾಗಿದೆ. ಯಡಿಯೂರಪ್ಪನವರು ಹೇಳಿದ್ದೇನೆಂದರೆ, ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸುವುದೇ ಆದರೆ, ಅದಕ್ಕೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಹುಬ್ಬಳ್ಳಿಯಲ್ಲಿ ಹೇಳಿ, ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಮೂಡಿಸಿದ್ದಾರೆ.












Click it and Unblock the Notifications