ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗೆ ಅಡ್ಡಿ

ಇಲ್ಲಿನ ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಈ ಬಗ್ಗೆ ಗದ್ದಲ ಎದ್ದಿತ್ತು. ಈಗ ಕೆನರಾ ಕಾಲೇಜಿನಲ್ಲಿ ಅಯ್ಯಪ್ಪ ವ್ರತಧಾರಿ ವಿದ್ಯಾರ್ಥಿ ವಿರುದ್ಧ ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಅಯ್ಯಪ್ಪ ಮಾಲೆ ಧರಿಸಿದ್ದ ರಕ್ಷಿತ್ ಎಂಬ ವಿದ್ಯಾರ್ಥಿ ವಿರುದ್ಧ ಕಾಲೇಜು ಎಚ್ಚರಿಕೆ ನೀಡಿದ್ದನ್ನು ಖಂಡಿಸಿ ವಿದ್ಯಾರ್ಥಿ ವೃಂದ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಅನಾರೋಗ್ಯದ ಕಾರಣ ಕಾಲೇಜಿಗೆ ಒಂದು ವಾರಗಳ ಕಾಲ ಗೈರು ಹಾಜರಾಗಿದ್ದ ರಕ್ಷಿತ್, ರಜೆ ಚೀಟಿ ನೀಡಲು ಕ್ಲಾಸ್ ಲೆಕ್ಚರರ್ ಬಳಿ ಹೋಗಿದ್ದಾನೆ. ಅವರು ಪ್ರಾಂಶುಪಾಲರನ್ನು ಕಾಣಲು ಹೇಳಿದ್ದಾರೆ.
ಪ್ರಾಂಶುಪಾಲರಾದ ಪ್ರಭಾ ಕಾಮತ್ ಅವರು ಗಡ್ಡಧಾರಿ ರಕ್ಷಿತ್ ನನ್ನು ಕೆಳಗಿಂದ ಮೇಲೆ ಒಮ್ಮೆ ನೋಡಿ, ಕಾಲೇಜು ನಿಯಮದಂತೆ ನೀಟಾಗಿ ಶೇವ್ ಮಾಡಿಕೊಂಡು ಬರಬೇಕು. ಅಯ್ಯಪ್ಪ ಮಾಲೆ ಕಾಣದಂತೆ ಶರ್ಟ್ ಒಳಗೆ ಹಾಕಿಕೊಳ್ಳಬೇಕು ಎಂದು ಆದೇಶಿಸಿದ್ದಾರೆ.
ಅಯ್ಯಪ್ಪ ವ್ರತಧಾರಿಗಳ ಗುರುಸ್ವಾಮಿಗಳ ಬಳಿ ಈ ಬಗ್ಗೆ ಚರ್ಚಿಸಿದ ರಕ್ಷಿತ್ ಮತ್ತೊಮ್ಮೆ ಪ್ರಾಂಶು ಪಾಲರನ್ನು ಕಂಡು ಮಾಲೆ ಧರಿಸಿದ ಮೇಲೆ ಕಟ್ಟು ನಿಟ್ಟಾಗಿ ನಡೆದುಕೊಳ್ಳಬೇಕು ನಾನು ಗಡ್ಡ ತೆಗೆಯುವಂತಿಲ್ಲ ಎಂದು ಮನವಿ ಮಾಡಿಕೊಂಡಿದ್ದಾನೆ.
ಆದರೆ, ಧಾರ್ಮಿಕ ಕಾರಣಗಳಿಗಾಗಿ ಕಾಲೇಜಿನ ನಿಯಮ ಮೀರಲು ಸಾಧ್ಯವಿಲ್ಲ ಎಂದು ಖಡಾಖಂಡಿತಾವಾಗಿ ಪ್ರಾಂಶುಪಾಲರು ಹೇಳಿ ಕಳಿಸಿದ್ದಾರೆ.
ಗೆಳೆಯರ ಅಪೇಕ್ಷೆಯಂತೆ ಈ ವಿಷಯವನ್ನು ಸ್ಥಳೀಯ ಶ್ರೀರಾಮ ಸೇನೆ ಮುಖಂಡ ಕುಮಾರ್ ಮಾಲೇಮಾರ್ ಕಿವಿಗೆ ಹಾಕಲಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಸೋಮವಾರ (ಡಿ.17) ಕಾಲೇಜಿಗೆ ತೆರಳಿ ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದರು.ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಯೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಮಸೀದಿಗಳ ಮೇಲೆ ಕಲ್ಲೆಸೆತ: ಇಲ್ಲಿನ ಕಾರ್ನಾಡು ಕುಳಾಯಿ ಬದ್ರಿಯಾ ಜುಮ್ಮಾ ಮಸೀದಿ, ಮುಲ್ಕಿ ಮಸೀದಿಗೆ ಭಾನುವಾರ ರಾತ್ರಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಘಟನೆ ನಡೆದಿದೆ.
ಸೋಮವಾರ ಮುಂಜಾನೆ ನಮಾಜ್ ಮಾಡಲು ಬಂದಾಗ ಈ ವಿಷಯ ತಿಳಿಯಿತು. ಯಾರು ಕೃತ್ಯ ಎಸೆಗಿದ್ದಾರೆ ಎಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮಸೀದಿಯ ಮುಖ್ಯಸ್ಥರು ಹೇಳಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸುರತ್ಕಲ್ ಠಾಣಾ ಪೊಲೀಸರು,ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಳಾಯಿ ಮಸೀದಿಯಲ್ಲಿ ಕಲ್ಲೆಸೆತ ನಡೆದ ಸಮಯದಲ್ಲೇ ಕಾರ್ನಾಡು, ಮುಲ್ಕಿ ಜುಮ್ಮಾ ಮಸೀದಿಗೂ ಕಿಡಿಗೇಡಿಗಳು ತೂರಾಟ ನಡೆಸಿದ್ದಾರೆ.
ಎಂದು ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ ಎಂದು ಮೂಲ್ಕಿ ಠಾಣಾ ಇನ್ಸ್‌ಪೆಕ್ಟರ್ ಬಶೀರ್ ಅಹ್ಮದ್ ಹೇಳಿದ್ದಾರೆ.












Click it and Unblock the Notifications