ಬೆಂಗಳೂರು ಕಸದಲ್ಲಿ 'ರಸ' ಕಂಡುಕೊಂಡ ಕುಮಾರಸ್ವಾಮಿ

ನಾನು ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಯಾವುದೇ ಕಾರಣಕ್ಕೂ ಬೆಂಗಳೂರು ಕಸ ವಿಲೇವಾರಿ ಘಟಕವನ್ನು ಇಲ್ಲಿ ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ನಗರದ ಕಸ ವಿಲೇವಾರಿ ಘಟಕಕ್ಕೆ ಭೂಮಿ ಗುರುತಿಸಿರುವುದರ ಹಿಂದೆ ಭೂಮಾಫಿಯಾದ ಕೈವಾಡವಿದೆ ಎಂದು ಈ ಹಿಂದೇನೂ ಹೇಳಿದ್ದೆ.
ಕ್ಯಾಬಿನೆಟ್ ದರ್ಜೆ ಸಚಿವರೂ ಸೇರಿ ಯಾರ್ಯಾರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವುದನ್ನು ಸಮಯ ಬಂದಾಗ ಬಹಿರಂಗ ಪಡಿಸುವೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಕಸವಿಲೇವಾರಿ ಘಟಕದ ವಿರುದ್ದ ನಾಗರಿಕರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
ನಾನು ಈ ಕ್ಷೇತ್ರದ ಪ್ರತಿನಿಧಿ, ನಿಮ್ಮ ಸಮಸ್ಯೆ ನನ್ನ ಸಮಸ್ಯೆ ಕೂಡಾ. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಸಾರ್ವಜನಿಕರ ಭಾರೀ ಕರತಾಡನದೊಂದಿಗೆ ಘೋಷಿಸಿದ್ದಾರೆ.
ಕೆಲ ಭೂಮಾಫಿಯಾಗಾರರು ಕ್ಯಾಬಿನೆಟ್ ದರ್ಜೆಯ ಸಚಿವರ ಜೊತೆ ಕೈಜೋಡಿಸಿ ನೀರಾವರಿ ಭೂಮಿಯನ್ನು ಹೊಡೆಯಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ.
ಅಮಾಯಕ ರೈತರು ಇದಕ್ಕೆ ಬಲಿಯಾಗುತ್ತಿದ್ದಾರೆ. ಜೆಡಿಎಸ್ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಜೆಡಿಎಸ್ ರೈತರ ಪರವಾಗಿರುವ ಪಕ್ಷ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅನ್ನದಾತರ ಮೇಲೆ ಗೋಲಿಬಾರ್ ಮಾಡುವ ಪಕ್ಷ ನಮ್ಮದಲ್ಲ ಎಂದು ಕುಮಾರಸ್ವಾಮಿ ಪುನರುಚ್ಚಿಸಿದ್ದಾರೆ.
ಬೆಂಗಳೂರು ಕಸ ವಿಲೇವಾರಿ ಸಂಬಂಧ ಕುಮಾರಸ್ವಾಮಿ ನಿಲುವಿಗೆ ಈ ಭಾಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.












Click it and Unblock the Notifications