ಯಡಿಯೂರಪ್ಪ ನಂಟು ಬೆಳೆಸಿದ್ದ 4 ಶಾಸಕರು 'ಯು' ಟರ್ನ್?

ಕಾರಣಾಂತರದಿಂದ ಕೆಜೆಪಿ ಸಖ್ಯ ಬೆಳೆಸಿದ್ದೇವೆ. ಬಿಜೆಪಿಯಲ್ಲೇ ನಾವು ಮುಂದುವರಿಯುತ್ತೇವೆ ಎಂದು ರಾಜ್ಯ ನಾಯಕರುಗಳಲ್ಲಿ ನಾಲ್ವರು ಶಾಸಕರು ವಿನಂತಿಸಿಕೊಂಡಿರುವುದರಿಂದಲೇ ಬಂಡಾಯ ಶಾಸಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದನ್ನು ವರಿಷ್ಠರು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಿದ್ದಾರೆಂದು ತಿಳಿದು ಬಂದಿದೆ.
ಲಕ್ಷ್ಮೀನಾರಾಯಣ (ಬೈಂದೂರು), ಡಾ.ವಿಶ್ವನಾಥ್ (ಕಡೂರು), ವಿರೂಪಾಕ್ಷಪ್ಪ (ಚನ್ನಗಿರಿ) ಮತ್ತು ಎಸ್ ವಿ ರಾಮಚಂದ್ರ (ಜಗಳೂರು) ಈ ನಾಲ್ವರು ಶಾಸಕರು ಬಿಜೆಪಿಯಲ್ಲೇ ಮುಂದುವರಿಯುವುದಾಗಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರ ಬಳಿ ಮನವಿ ಮಾಡಿದ್ದಾರೆನ್ನಲಾಗಿದೆ.
ಪ್ರಸಕ್ತ ಚಳಿಗಾಲದ ಅಧಿವೇಶನ ಮುಗಿದ ನಂತರವೇ ಬಂಡಾಯ ಶಾಸಕರ ವಿರುದ್ದ ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಈಶ್ವರಪ್ಪ, ಶೆಟ್ಟರ್, ಪ್ರಹ್ಲಾದ್ ಜೋಷಿ, ಸದಾನಂದ ಗೌಡ, ಅಶೋಕ್ ಮತ್ತು ಸಂಘಟನೆಯ ಕಾರ್ಯದರ್ಶಿ ಸಂತೋಷ್ ಸಭೆಯಲ್ಲಿ ಭಾಗವಹಿಸಿದ್ದರು.
ನಾನು ಶಿವರಾಜ್ ಸಜ್ಜನ್ ಅವರ ಮನೆಗೆ ಉಪಹಾರಕ್ಕೆ ಹೋಗಿದ್ದೆ. ಯಡಿಯೂರಪ್ಪ ಅವರಿಗೆ ನಾನು ಆಪ್ತನಾಗಿರಬಹುದು. ಬಿಜೆಪಿ ನೀಡಿದ ವಿಪ್ ಅನ್ನು ನಾನು ಉಲ್ಲಂಘಿಸುವುದಿಲ್ಲ ಮತ್ತು ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಲಿಲ್ಲ ಎಂದು ಶಾಸಕ ವಿರೂಪಾಕ್ಷಪ್ಪ ಹೇಳಿದ್ದಾರೆ.
ನಾನು ಯಡಿಯೂರಪ್ಪ ಅವರ ಅಭಿಮಾನಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ನನಗೆ ಟಿಕೆಟ್ ನೀಡಿದರೆ ನಾನು ಪಕ್ಷದಲ್ಲೇ ಮುಂದುವರಿಯುತ್ತೇನೆ ಎಂದು ಬೈಂದೂರು ಶಾಸಕ ಲಕ್ಷ್ಮೀನಾರಾಯಣ ಹೇಳಿದ್ದಾರೆ.












Click it and Unblock the Notifications