ಯಾರು ಕಾಲಿಗೆ ಬೀಳ್ತಾರೆ, ಯಾರು ಎಳೀತಾರೆ ಬಲ್ಲವರಾರು?

ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆಯೇ (13 ಡಿಸೆಂಬರ್) ತಮ್ಮ ಬೆಂಬಲಿಗ ಶಾಸಕರ ಜತೆಗೆ ಚಹಾಕೂಟ ಏರ್ಪಡಿಸುವ ಪ್ಲಾನ್ ಹಾಕಿದ್ದಾರೆ. ಈ ಚಹಾಕೂಟ ಬೆಂಗಳೂರಿನಲ್ಲಿರುವ ಯಾವುದೋ ಒಂದು ರೆಸಾರ್ಟ್ ನಲ್ಲಿ ನಡೆಯಲಿದೆ.
ಶೆಟ್ಟರ್ ಸರಕಾರವನ್ನು ಉರುಳಿಸಲು ಅಗತ್ಯವಾದಷ್ಟು ಶಾಸಕರನ್ನು ಕಲೆಹಾಕಿ ಅವರೆಲ್ಲರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡುವುದು ಬಿಎಸ್ವೈ ಉದ್ದೇಶ. ಈ ಚಹಾಕೂಟದಲ್ಲಿ 20ರಿಂದ 25 ಶಾಸಕರು ಭಾಗವಹಿಸುವ ನಿರೀಕ್ಷೆ ಇದೆ. ಆದರೆ, ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಇದ್ದ ಬಂಡಾಯದ ಬಿಸಿ ಈಗ ಕಾಣೆಯಾಗಿರುವುದು ಒಂದು ಹಿನ್ನಡೆ.
ಬಾಲಗ್ರಹದ ಕಾಟ : ಯಡಿಯೂರಪ್ಪ ಅವರ ಹೊಸ ಪಕ್ಷಕ್ಕೆ ಬಾಲಗ್ರಹದ ಕಾಟ ಕಂಡುಬಂದಿರುವುದು ಇನ್ನೊಂದು ಕಂಟಕ. ಹಾವೇರಿ ಸಮಾವೇಶದಲ್ಲಿ ಭಾಗವಹಿಸಿದ್ದ 14 ಶಾಸಕರ ಪೈಕಿ ಕೆಲವರು ಕೆಜೆಪಿಗೆ ಉಲ್ಟಾ ಹೊಡೆಯುತ್ತಿರುವ ಬೆಳವಣಿಗೆ ಆತಂಕ ಸೃಷ್ಟಿಸಿದೆ.
ಉಲ್ಟಾ ಹೊಡೆಯುವ ಶಾಸಕರು ಯಾರೆಂದರೆ, ರೇವೂನಾಯಕ್ ಬೆಳಮಗಿ, ಚಂದ್ರಕಾಂತ್ ಬೆಲ್ಲದ್, ಕಡೂರು ವಿಶ್ವನಾಥ್, ಬ್ಯಾಡಗಿಯ ಸುರೇಶ್ ಗೌಡ, ಜಿ. ಶಿವಣ್ಣ. ಇನ್ನು ಚಹಾ ಕೂಟದಲ್ಲಿ ಭಾಗವಹಿಸಿಯೂ ಕೆಜೆಪಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಸಚಿವರೆಂದರೆ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ.
ಬಂಡಾಯ ಶಾಸಕರು ಹೇಳುವಂತೆ "ನಾವು ಅಲ್ಲಿಗೆ ಹೋಗಿದ್ದು ಟೀ ಕುಡಿಯುವ ಸದ್ಭಾವನಾ ಕೂಟ ಮಾತ್ರವಾಗಿತ್ತು. ಆದರೆ, ವೇದಿಕೆ ಹತ್ತುವಂತೆ ಒತ್ತಾಯ ಮಾಡಿ ಹತ್ತಿಸಿದರು."
ಈ ಎಲ್ಲ ಹಿನ್ನೆಲೆಯಲ್ಲಿ ಬೆಂಗಳೂರು ಚಹಾಕೂಟ ಕರೆಯುವ ಅಗತ್ಯ ಯಡಿಯೂರಪ್ಪ ಅವರಿಗೆ ಎದುರಾಗಿದೆ. ಸದ್ಯ ಬೆಳಗಾವಿಯಲ್ಲಿ ಎಲ್ಲ ಶಾಸಕರು ಹಾಜರಿರುವುದರಿಂದ ಒಬ್ಬರಿಗೊಬ್ಬರು ಸಿಗುತ್ತಾರೆ. ಒಮ್ಮೆ ಅಧಿವೇಶನ ಮುಗಿಯಿತೆಂದರೆ ಬಿಎಸ್ ವೈ ಬಂಡಾಯದ ಹೊಸ ಪರ್ವ ಆರಂಭವಾದಂತೆಯೇ.
ಈ ನಡುವೆ ಪಕ್ಷಕ್ಕೆ ದ್ರೋಹ ಬಗೆಯುತ್ತಿರುವ 14 ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ವಿಚಾರವಾಗಿ ಬುಧವಾರ ಬಿಜೆಪಿ ಕೋರ್ ಕಮಿಟಿ ಸಭೆ ಸೇರತ್ತೆ. ಮೊದಲಿಗೆ ಶಾಸಕರಿಗೆ ನೋಟೀಸ್ ನೀಡಲಾಗತ್ತೆ. ಅದಕ್ಕೆ ಉತ್ತರಿಸಿದವರು ಬಚಾವ್. ಕ್ಯಾರೇ ಎನ್ನದವರು ಸಸ್ಪೆಂಡ್. ಈ ನಡುವೆ, ಎಲ್ಲ 14 ಶಾಸಕರನ್ನು ಕಿತ್ತು ಬಿಸಾಡುವುದಾಗಿ ಸದಾನಂದ ಗೌಡ ಎಚ್ಚರಿಕೆ ನೀಡಿದ್ದಾರೆ.
ಕೆಜೆಪಿ ಪರ ಗುರುತಿಸಿಕೊಂಡಿರುವ ರೇವೂನಾಯಕ್ ಬೆಳಮಗಿ ಸೋಮವಾರ ಬೆಳಗ್ಗೆ ಸದನದಲ್ಲಿ ಈಶ್ವರಪ್ಪ ಅವರ ಕಾಲು ಮುಟ್ಟಿ ನಮಸ್ಕರಿಸಿದ ದೃಶ್ಯ ಯಡಿಯೂರಪ್ಪ ಪಾಳೆಯದಲ್ಲಿ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಯಾರು ಯಾರ ಕಾಲಿಗೆ ಬೀಳ್ತಾರೆ ಯಾರು ಯಾರ ಕಾಲು ಎಳೆಯುತ್ತಾರೋ, ಯಾರು ಬಲ್ಲರು?











Click it and Unblock the Notifications