ಬೆಳಗಾವಿಯ ಕೆಟ್ಟ ಚಳಿಗಾಳಿಗೆ ಮೈಯೊಡ್ಡಿದವರು
ಬೆಳಗಾವಿ, ಡಿ. 11 : ಹಾವೇರಿಯಲ್ಲಿ ಯಡಿಯೂರಪ್ಪನವರು ಏರಿದ್ದ ರಾಜಕೀಯದ ಕಾವನ್ನು ಬೆಳಗಾವಿಯಲ್ಲಿ ಬೀಸಿರುವ ಕೆಟ್ಟ ಚಳಿಗಾಳಿ ತುಸು ತಗ್ಗಿಸಿದೆ. ಬೆಳಗಾವಿಯಲ್ಲಿ ಗರಿಷ್ಠ ತಾಪಮಾನ ಮೂವತ್ತು ಮೂವತ್ತೊಂದರ ಆಸುಪಾಸಿನಲ್ಲಿದ್ದರೆ, ಕನಿಷ್ಠ ತಾಪಮಾನ ಹದಿಮೂರರಿಂದ ಹದಿನೈದರ ನಡುವೆ ಓಡಾಡುತ್ತಿದೆ.
ಈ ಚಳಿಯ ಜೊತೆಗೆ, ಸರಕಾರವೇ ಬಿದ್ದುಹೋಗಲಿ ಪ್ರಳಯವೇ ಆಗಲಿ, ಬಿಜೆಪಿಯಲ್ಲಿ ಇದ್ದುಕೊಂಡೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹಿಂದೆ ಹೋದ 14 ಶಾಸಕರು, ಸಂಸದರನ್ನು ಸುಮ್ಮನೆ ಬಿಡುವುದಿಲ್ಲ. ಒಂದೇ ಬಾಣಲೆಯಲ್ಲಿ ಹಾಕಿ ಹುರಿದುಬಿಡುತ್ತೇವೆ ಎಂಬು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಅಬ್ಬರಿಸಿರುವುದು ಮತ್ತಷ್ಟು ಚಳಿನಡುಕವನ್ನು ಹುಟ್ಟಿಸಿದೆ.

ಹಾಗೆಯೆ, ಬಲ್ಲ ಮೂಲಗಳ ಪ್ರಕಾರ, ಫಲಪ್ರದವಾದ ಖಾತೆಯಲ್ಲಿ ಇದ್ದುಕೊಂಡು ಭಾರತೀಯ ಜನತಾಪಕ್ಷಕ್ಕೆ ದ್ರೋಹ ಬಗೆಯುತ್ತಿರುವ ಐವರು ಕ್ಯಾಬಿನೆಟ್ ಸಚಿವರ ಚಾಚಿರುವ ಬಾಲವನ್ನು ಕತ್ತರಿಸಿ ಹಾಕಲು ಬಿಜೆಪಿಯಲ್ಲಿ ತಂತ್ರಗಾರಿಕೆ ನಡೆಯುತ್ತಿದೆ. ಆ ಐವರು ಯಾರೆಂದರೆ, ಶೋಭಾ ಕರಂದ್ಲಾಜೆ (ಇಂಧನ), ರೇಣುಕಾಚಾರ್ಯ (ಅಬಕಾರಿ), ಮುರುಗೇಶ್ ನಿರಾಣಿ (ಬೃಹತ್ ಉದ್ಯಮ), ಸಿಎಂ ಉದಾಸಿ (ಲೋಕೋಪಯೋಗಿ) ಮತ್ತು ಉಮೇಶ್ ಕತ್ತಿ (ಕೃಷಿ).
ಇವರಿಂದ ಖಾತೆಗಳನ್ನು ಕಿತ್ತುಕೊಂಡು ಪ್ರಮುಖವಲ್ಲದ ಹುದ್ದೆ ನೀಡಿ ಇವರ ಹುಟ್ಟಡಗಿಸುವ ತಂತ್ರಗಾರಿಕೆ ಬಿಜೆಪಿಯಲ್ಲಿ ರೂಪಿಸಲಾಗಿದೆ. ಈಗಾಗಲೆ ಕರ್ನಾಟಕದ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಬೆಳಗಾವಿಗೆ ಬಂದಿದ್ದು, ಬುಧವಾರ ಡಿ.12ರಂದು ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬೀಳುವ ಎಲ್ಲ ಸಾಧ್ಯತೆಗಳೂ ಕಂಡುಬರುತ್ತಿವೆ.
ತಮ್ಮ ತಲೆಯ ಮೇಲೆ ಕತ್ತಿ ತೂಗುತ್ತಿರುವುದು ತಿಳಿದುಬರುತ್ತಿದ್ದಂತೆ, ಯಡಿಯೂರಪ್ಪ ಕೊಡಿಸಿದ ಟೀ ಕುಡಿಯಲು ಹಾವೇರಿಗೆ ಹೋಗಿದ್ದ ಕೆಲವರಿಗೆ ಕಾಲಲ್ಲಿ ಹಾವು ಹರಿದಾಡಿದಂತೆ ಭಾಸವಾಗುತ್ತಿದೆ. ಯಡಿಯೂರಪ್ಪನವರನ್ನು ನಂಬಿ ಅವರ ಹಿಂದೆ ಹೋಗಬೇಕೋ ಅಥವಾ ಬಿಜೆಪಿ ನಾಯಕರ ಕೋಪಕ್ಕೆ ಮಾತ್ರವಲ್ಲ ಮತದಾರರ ಸಿಟ್ಟಿಗೂ ತುತ್ತಾಗದೆ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಮೂಲ ಪಕ್ಷದಲ್ಲೇ ಉಳಿಯುವುದೋ ಎಂಬ ದ್ವಂದ್ವದಲ್ಲಿದ್ದಾರೆ.
ಒಟ್ಟಿನಲ್ಲಿ, ಹಲವಾರು ಶಾಸಕರಿಗೆ ಚಳಿಗಾಲದ ಅಧಿವೇಶನ ಸುಮ್ಮನೆ ಕಾಟಾಚಾರದ ಅಧಿವೇಶನವಾಗಿದೆ. ಯಾವ ಮಸೂದೆ ಮಂಡನೆಯಾಗುವುದು ಎಂಬುದಕ್ಕಿಂತ ನಾಳೆ ರಾಜ್ಯ ರಾಜಕೀಯದಲ್ಲಿ ಎಂಥ ಕೆಟ್ಟ ಗಾಳಿ ಬೀಸಲಿದೆ ಎಂದು ಎದುರು ನೋಡುತ್ತಿದ್ದಾರೆ. ಆದಿದ್ದಾಗಲಿ ಚಳಿಗೆ ಮೈಯೊಡ್ಡುವುದೋ ಅಥವಾ ಇದ್ದಲ್ಲೇ ಇದ್ದು ಸ್ವೆಟರ್, ಮಫ್ಲರ್ ಸುತ್ತಿಕೊಂಡು ರಾಜಕೀಯದ ಆರೋಗ್ಯವನ್ನು ಸೇಫ್ ಆಗಿಟ್ಟುಕೊಳ್ಳುವುದೋ ಎಂಬ ಲೆಕ್ಕಾಚಾರದಲ್ಲೇ ಇದ್ದಾರೆ.












Click it and Unblock the Notifications