'ಒಟ್ಟಾಗಿ ಹೋರಾಡಿ, ಇಲ್ಲ ಎಲ್ಲ ರಾಜೀನಾಮೆ ನೀಡಿ'

ಹಾವೇರಿಯಲ್ಲಿ ಭಾನುವಾರ ಡಿ.9ರಂದು ನಡೆಯಲಿರುವ ಕರ್ನಾಟಕ ಜನತಾ ಪಕ್ಷದ ಅಧಿಕೃತ ಉದ್ಘಾಟನೆಯ ಸಿದ್ಧತೆಯನ್ನು ನೋಡಲು ಹಾವೇರಿಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಎಲ್ಲ ಶಾಸಕರು ಒಗ್ಗಟ್ಟಿನಿಂದ ಮತ್ತು ಪಕ್ಷಾತೀತವಾಗಿ ಕಾವೇರಿ ನೀರು ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಈ ದೃಷ್ಟಿಯಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಎರಡು ದಿನಗಳ ಕಾಲ ಮುಂದೂಡಬೇಕು. ಕೂಡಲೆ ಎಲ್ಲರೂ ದೆಹಲಿಗೆ ಧಾವಿಸಿ ಪ್ರಧಾನಿಗೆ ಮೇಲ್ಮನವಿ ಸಲ್ಲಿಸಿ ಪಕ್ಷಾತೀತವಾದ ಹೋರಾಟ ಮಾಡಬೇಕು ಎಂದು ಅವರು ನುಡಿದರು.
ಯಾರಿಗೂ ಆಹ್ವಾನ ನೀಡಿಲ್ಲ : ಕೆಜೆಪಿ ಉದ್ಘಾಟನೆಗೆ ತಮ್ಮನ್ನು ಬೆಂಬಲಿಸುತ್ತಿರುವ ಯಾವುದೇ ಬಿಜೆಪಿ ಶಾಸಕರಿಗೆ ಆಹ್ವಾನ ನೀಡಿಲ್ಲ. ತಮ್ಮ ಮೇಲೆ ಅಭಿಮಾನ, ಪ್ರೀತಿ ಇಟ್ಟವರು ಯಾರು ಬೇಕಾದರೂ ಈ ಸಮಾರಂಭಕ್ಕೆ ಬರಬಹುದಾಗಿದೆ ಎಂದು ಯಡಿಯೂರಪ್ಪ ಹೇಳಿದರು. ತಮ್ಮ ಬದ್ಧವೈರಿ ಕೆಎಸ್ ಈಶ್ವರಪ್ಪ ಅವರನ್ನು ಮತ್ತೆ ಪರೋಕ್ಷವಾಗಿ ಕೆಣಕಿದ ಅವರು, ಈಶ್ವರಪ್ಪ ಮಹಾನ್ ವ್ಯಕ್ತಿ, ಅಂಥವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಈ ನಡುವೆ, ಪ್ರಧಾನಿ ನೇತೃತ್ವದಲ್ಲಿ ಕಾವೇರಿ ನೀರು ಪ್ರಾಧಿಕಾರದ ಸಭೆ ದೆಹಲಿಯ ಶ್ರಮಶಕ್ತಿ ಭವನದಲ್ಲಿ ಶುಕ್ರವಾರ ಸಂಜೆ ಮುಗಿದಿದ್ದು, ಯಾವುದೇ ಸಮಯದಲ್ಲಿ ನಿರ್ಣಯ ಹೊರಬೀಳುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಮತ್ತು ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕದಲ್ಲಿ ನೀರಿನ ಭಾರೀ ಕೊರತೆ ಇರುವ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಲು ಯತ್ನಿಸಿದ್ದಾಗಿ ರಾಜ್ಯದ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications