ಕಾಂಗ್ರೆಸ್ ಟಿಕೆಟ್ ಆಮಿಷಕ್ಕೆ 4 ಪಕ್ಷೇತರರ ಬಲಿ?

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರ 2008ರಲ್ಲಿ ಸ್ಪಷ್ಟ ಬಹುಮತ ಸಿಗದೆ, ಸರಕಾರ ರಚಿಸದೆ ಸಂಕಷ್ಟದಲ್ಲಿದ್ದಾಗ ಕೈಹಿಡಿದು ಬಿಜೆಪಿ ಪಾಲಿನ 'ಆಪದ್ಬಾಂಧವ'ರಾಗಿದ್ದ ಪಕ್ಷೇತರ ಶಾಸಕರು ಈಗ ಕಾಂಗ್ರೆಸ್ ಸೇರುವ ಹವಣಿಕೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆ ಎದುರಿಸಲಿದ್ದಾರೆ.
ಹಿರಿಯೂರು ಶಾಸಕ ಡಿ. ಸುಧಾಕರ್, ಮಳವಳ್ಳಿ (ಎಸ್‌ಸಿ) ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ಪಾವಗಡ (ಎಸ್‌ಸಿ) ಶಾಸಕ ವೆಂಕಟರಮಣಪ್ಪ ಮತ್ತು ಕನಕಗಿರಿ (ಎಸ್‌ಸಿ) ಶಾಸಕ ಶಿವರಾಜ್ ತಂಗಡಗಿ ಟಿಕೆಟ್ ಆಶೆಯಿಂದ ಕಾಂಗ್ರೆಸ್ ಸೇರುವುದು ಹೆಚ್ಚೂಕಡಿಮೆ ಖಚಿತವಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಇನ್ನಿಬ್ಬರು ಪಕ್ಷೇತರರಾದ ಗೂಳಿಹಟ್ಟಿ ಶೇಖರ್ (ಹೊಸದುರ್ಗ) ಮತ್ತು ವರ್ತೂರು ಪ್ರಕಾಶ್ (ಕೋಲಾರ) ಏನು ಮಾಡಲಿದ್ದಾರೆ ಇನ್ನೂ ತಿಳಿದುಬಂದಿಲ್ಲ.
ನಾಲ್ಕು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷ ಆರಂಭಿಸಿದ್ದ ಆಪರೇಷನ್ ಈಗ ಕಾಂಗ್ರೆಸ್ ಮುಂದುವರಿಸಿದೆ. ಬಿಜೆಪಿ ಒಡೆದು ಮೂರು (ಮೂಲ ಬಿಜೆಪಿ, ಯಡಿಯೂರಪ್ಪ ಬಣ ಮತ್ತು ಶ್ರೀರಾಮುಲು ಬಣ) ಭಾಗವಾಗಿರುವ ಸಂದರ್ಭ ವಿರೋಧಪಕ್ಷಗಳ ದೌರ್ಬಲ್ಯದ ಲಾಭ ಪಡೆಯುವ ಉದ್ದೇಶದಿಂದ ಪಕ್ಷೇತರ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಯತ್ನ ನಡೆಸಿದೆ.
ಆಪರೇಷನ್ ಕಮಲವನ್ನು ಹಿಗ್ಗಾಮುಗ್ಗಾ ಝಾಡಿಸಿದ್ದ ಕಾಂಗ್ರೆಸ್ ಈಗ 'ಆಪರೇಷನ್ ಕಾಂಗ್ರೆಸ್'ಗೆ ಮುಂದಾಗಿದ್ದು, ರಾಜಕೀಯದಲ್ಲಿ ಬಾಳಿಬದುಕಬೇಕಿದ್ದರೆ ಎಲ್ಲ ತಂತ್ರಗಾರಿಕೆಯನ್ನು ಬಳಸಲೇಬೇಕು ಎಂಬುದನ್ನು ತಾನೇ ಸಾಧಿಸಿ ತೋರಿಸಿದೆ. ಆದರೆ, ಕಾಂಗ್ರೆಸ್‌ನ ಈ ನಡೆ ಟಿಕೆಟ್ ಆಕಾಂಕ್ಷಿಗಳಾದ ಮೂಲ ಸದಸ್ಯರಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ. ಇದನ್ನು ವಿರೋಧಿಸಿ ಕೆಲವರು ಬೇರೆ ಪಕ್ಷಕ್ಕೆ ವಲಸೆ ಹೋದರೂ ಅಚ್ಚರಿಯಿಲ್ಲ ಎಂಬ ಸ್ಥಿತಿ ನಿರ್ಮಿಸಿದೆ.
ಈ ನಡುವೆ, ಎಲ್ಲರ ಗಮನ ಡಿ.8ರಂದು ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯತ್ತ ಮತ್ತು ಡಿ.9ರಂದು ಹಾವೇರಿಯಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷದ ಉದ್ಘಾಟನೆಯತ್ತ ನೆಟ್ಟಿದೆ. ಬಿಜೆಪಿಯಲ್ಲಿರುವ ಶಾಸಕರನ್ನು ತನ್ನೆಡೆ ಸೆಳೆಯಲು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ತಂತ್ರಗಾರಿಕೆ ರೂಪಿಸುತ್ತಿದ್ದರೆ, ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸಪಡುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಾದುನೋಡುವ ತಂತ್ರ ಅನುಸರಿಸುತ್ತಿವೆ.
ಯಡಿಯೂರಪ್ಪ ಬೆಂಬಲಿಗರಿಗಾಗಿ ಬಿಜೆಪಿಯ ಎಂಎಲ್‌ಸಿ ಹಾವೇರಿಯ ಶಿವರಾಜ್ ಸಜ್ಜನ್ ಅವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಚಹಾಕೂಟವನ್ನು ರದ್ದುಪಡಿಸುವ ಸಂಭವವಿದ್ದು, ಬೆಳಗಾವಿಗೆ ಶನಿವಾರ ಹಾರಲಿರುವ ಯಡಿಯೂರಪ್ಪ ಅವರು ಆ ಎಲ್ಲ ಬೆಂಬಲಿಗರನ್ನು ಹಾವೇರಿಯ ಬದಲು ಬೆಳಗಾವಿಯಲ್ಲೇ ಭೇಟಿ ಮಾಡಿ, ಬಿಜೆಪಿ ನಾಯಕರನ್ನು ಮತ್ತಷ್ಟು ಮುಜುಗರಕ್ಕೀಡು ಮಾಡುವ ಹವಣಿಕೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷೇತರ ಶಾಸಕರು ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಸೇರುತ್ತಲಿರುವುದು ಬಿಜೆಪಿಗೆ ನುಂಗಲಾಗರ ತುತ್ತಾಗಿದೆ.












Click it and Unblock the Notifications