ಬಿಜೆಪಿಯಲ್ಲಿನ ಕಳೆ ಕೀಳಲು ಡಿವಿಎಸ್‌ಗೆ ಸರ್ವಾಧಿಕಾರ?

DVS to be Karnataka BJP president
ಬೆಂಗಳೂರು, ಡಿ. 6 : ಹಾವೇರಿಯಲ್ಲಿ ಕರ್ನಾಟಕ ಜನತಾ ಪಕ್ಷದ ಉದ್ಘಾಟನೆಯ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಭಾರತೀಯ ಜನತಾ ಪಕ್ಷದ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿದ್ದು, ಕೆಜೆಪಿ ವಿರುದ್ಧ ಪ್ರತಿತಂತ್ರ ಹೂಡಲು ಮತ್ತು ಯಡಿಯೂರಪ್ಪನವರಿಲ್ಲದ ಬಿಜೆಪಿಯನ್ನು ಮತ್ತಷ್ಟು ಗಟ್ಟಿ ಮಾಡಲು ಸಿದ್ಧತೆಗಳು ಸಮರೋಪಾದಿಯಲ್ಲಿ ಆರಂಭವಾಗಿವೆ.

ಖಾಸಗಿ ಟಿವಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ಯಡಿಯೂರಪ್ಪನವರ ವ್ಯಕ್ತಿತ್ವವನ್ನು ಬಯಲಿಗೆಳೆದಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡರನ್ನು ಮತ್ತೆ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿಸಲು ದೆಹಲಿಯ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಡಿ.ವಿ. ಸದಾನಂದ ಗೌಡ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಉಪ ಮುಖ್ಯಮಂತ್ರಿ ಮತ್ತು ಹಾಲಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಡಿ.8 ಶನಿವಾರದಂದು ದೆಹಲಿಗೆ ಬರಬೇಕೆಂದು ವರಿಷ್ಠರಿಂದ ಆಜ್ಞೆಯಾಗಿದೆ. ದೆಹಲಿಯಲ್ಲಿ ಅಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ಕೆಲ ಮಹತ್ವದ ಮತ್ತು ದಿಟ್ಟ ನಿರ್ಧಾರಗಳು ಹೊರಬೀಳಲಿವೆ ಎಂದು ನಿರೀಕ್ಷಿಸಲಾಗಿದೆ.

ಕೆಜೆಪಿಗೆ ಸೇರಲು ಅನೇಕ ಶಾಸಕರು ತೆರೆಮರೆಯ ಯತ್ನ ನಡೆಸಿರುವ ಹಿನ್ನೆಲೆಯಲ್ಲಿ, ಡಿವಿಎಸ್‌ರನ್ನು ರಾಜ್ಯಾಧ್ಯಕ್ಷ ಮಾಡಿ ಅವರಿಗೆ ಪಕ್ಷವಿರೋಧಿ ಚಟುವಟಿಕೆ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸರ್ವಾಧಿಕಾರ ನೀಡಲು ನಿರ್ಧರಿಸಲಾಗಿದೆ. ಡಿ.ವಿ. ಸದಾನಂದ ಗೌಡ ಕೂಡ ಇದೇ ಮಾತನ್ನು ಧ್ವನಿಸಿದ್ದಾರೆ. ಕೆಜೆಪಿ ಸಮಾರಂಭ ನಡೆದ ಮರುದಿನ, ಅಂದರೆ ಡಿ.10ರಿಂದ ಕಳೆ ಕಿತ್ತು ಬಿಸಾಕುವ ಯಜ್ಞ ಆರಂಭವಾಗಲಿದೆ.

ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದಾಗ ಮತ್ತು ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಕೆಲಸ ಮಾಡಿದ್ದೇನೆ. ಈಗ ಕೂಡ ಜವಾಬ್ದಾರಿ ವಹಿಸಿದರೆ ಅಷ್ಟೇ ನಿಷ್ಠೆಯಿಂದ ಕರ್ತವ್ಯ ನಿಭಾಯಿಸುತ್ತೇನೆ ಎಂದು ಹೇಳಿರುವ ಡಿವಿ ಸದಾನಂದ ಗೌಡ, ಯಾರೇ ಪಕ್ಷವಿರೋಧಿ ಚಟುವಟಿಕೆ ನಡೆಸಲಿ, ಇನ್ನು ಮುಂದೆ ಯಾವುದೇ ರಿಯಾಯಿತಿ ತೋರುವುದಿಲ್ಲ, ನಿರ್ದಾಕ್ಷಿಣ್ಯವಾಗಿ ಗೇಟ್ ಪಾಸ್ ನೀಡಲಾಗುವುದು ಎಂದು ಗುಡುಗಿದ್ದಾರೆ.

ಜೊತೆಗೆ, ಮುಖ್ಯಮಂತ್ರಿಯಾಗಿರುವ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ವರಿಷ್ಠರಿ ಆಸಕ್ತಿ ತೋರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಯಾವುದೇ ಭ್ರಷ್ಟಾಚಾರವನ್ನು ಎದುರಿಸದ ಗೌಡ ಜನಾಂಗದ ಸದಾನಂದ ಗೌಡ, ಕುರುಬ ಜನಾಂಗದ ಈಶ್ವರಪ್ಪ ಮತ್ತು ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರ ಮುಂದಾಳತ್ವದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ಆಶಯವನ್ನು ಬಿಜೆಪಿ ಹೈಕಮಾಂಡ್ ಹೊಂದಿದೆ ಎಂದು ತಿಳಿದುಬಂದಿದೆ.

ಬಿಜೆಪಿಯಲ್ಲಿನ ಈ ಚಟುವಟಿಕೆ ಕುರಿತು ಪ್ರತಿಕ್ರಿಯಿಸಿರುವ ಕೆಜೆಪಿ ಹಂಗಾಮಿ ಅಧ್ಯಕ್ಷ ಧನಂಜಯ್ ಕುಮಾರ್ ಅವರು, ಹಾವೇರಿಗೆ ಯಾರೋ ಕರೆದಿರುವ ಬ್ರೆಕ್‍‌ಫಾಸ್ಟ್ ಕೂಟಕ್ಕೆ ಬಿಜೆಪಿಯಲ್ಲಿರುವ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿರುವ ಶಾಸಕರು ಬರುತ್ತಿದ್ದಾರೆ. ಅವರೇನು ಕೆಜೆಪಿ ಸಮಾರಂಭಕ್ಕೆ ಬರುತ್ತಿಲ್ಲ. ಚಹಾಕೂಟಕ್ಕೆ ಬರುತ್ತಿರುವ ಶಾಸಕರ ವಿರುದ್ಧ ಹೇಗೆ ಕ್ರಮ ತೆಗೆದುಕೊಳ್ಳುತ್ತೀರಿ. ಒಂದು ವೇಳೆ ಕ್ರಮ ತೆಗೆದುಕೊಂಡರೆ ಹುಷಾರ್ ಎಂದು ಕೂಗಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+