ಬೆಳಗಾವಿಯಲ್ಲಿ ಕಾವೇರಲಿದೆ ಚಳಿಗಾಲ ಅಧಿವೇಶನ
ಬೆಳಗಾವಿ ಡಿ.4: ಗಡಿನಾಡೂ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ಬಾರಿಗೆ ವಿಧಾನಮಂಡಲದ ಚಳಿಗಾಲದ ಚೊಚ್ಚಲ ಅಧಿವೇಶನಕ್ಕೆ ಡಿ.5 ರಿಂದ ಆರಂಭಗೊಳ್ಳಲಿದೆ. ಸುಮಾರು 16 ಮಸೂದೆಗಳ ಮಂಡನೆ ಜೊತೆಗೆ ಯಡಿಯೂರಪ್ಪ ಅವರ ಅನುಪಸ್ಥಿತಿ ಎದ್ದು ಕಾಣಲಿದೆ.
ಸುವರ್ಣ ವಿಧಾನಸೌಧವು ನಗರದ ಹೊರವಲಯದಲ್ಲಿರುವ ಕಾರಣದಿಂದ ಶಾಸಕರಿಗೆ ವಾಹನ ಸೌಲಭ್ಯದೊಂದಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಅಧಿವೇಶನ ಡಿ.5 ರಂದು ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿದೆ. ಅಸೆಂಬ್ಲಿ ಕಾರ್ಯದರ್ಶಿಗಳ ಲೆಕ್ಕಾಚಾರದಂತೆ ಸುಮಾರು 704 ಪ್ರಶ್ನೆಗಳು ಸಿದ್ಧವಿದೆ.

ಬೆಂಗಳೂರಿನಿಂದ ಅಗತ್ಯ ಕಡತಗಳನ್ನು ತರಿಸಲಾಗಿದೆ. ಅಧಿವೇಶನ ಯಶಸ್ವಿಯಾಗಿ ನಡೆಯಲು ಅನುಕೂಲವಾಗುವಂತೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಮಸೂದೆ ಮಂಡನೆ ಸಾಧ್ಯವೇ?: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಸರ್ಕಾರ ಭೂ ಸುಧಾರಣಾ ಕಾಯ್ದೆ(ತಿದ್ದುಪಡಿ)2012ಯನ್ನು ಪುನರ್ ಮಂಡಿಸಲು ಸಿದ್ಧತೆ ನಡೆಸಿದೆ.
ಇದಲ್ಲದೆ, ಈ ಅಧಿವೇಶನದಲ್ಲಿ ರಾಜ್ಯಪಾಲರಿಂದ ವಾಪಸ್ ಬಂದಿರುವ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ಮಸೂದೆ, ಈಗಾಗಲೆ ಮಂಡನೆಯಾಗಿರುವ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ಮಸೂದೆ ಜೊತೆಗೆ ವಿವಾದಿತ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ (ತಿದ್ದುಪಡಿ) ಮಸೂದೆ ಕೂಡಾ ಮಂಡನೆಗೆ ಸಿದ್ಧವಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ, ಮಣಿಪಾಲ ವಿಶ್ವವಿದ್ಯಾಲಯ ಮಸೂದೆ, ಅರ್ಕ ವಿಶ್ವವಿದ್ಯಾಲಯ ಮಸೂದೆ, ದಯಾನಂದ ಸಾಗರ ವಿಶ್ವವಿದ್ಯಾಲಯ ಮಸೂದೆ, ವೆಲ್ಲೂರು ತಾಂತ್ರಿಕ ವಿಶ್ವವಿದ್ಯಾಲಯ ಮಸೂದೆ, ಎಂ.ಎಸ್.ರಾಮಯ್ಯ ಅನ್ವಯಿಕ ವಿಶ್ವವಿದ್ಯಾಲಯ ಮಸೂದೆ, ದೇವರಾಜ್ ಅರಸು ವಿಶ್ವವಿದ್ಯಾಲಯ ಮಸೂದೆ, ಕರ್ನಾಟಕ ಪೌರನಿಗಮಗಳ ತಿದ್ದುಪಡಿ ಮಸೂದೆಗಳು ಚರ್ಚೆಗೆ ಬರಲಿವೆ ಎಂದು ಬೋಪಯ್ಯ ಹೇಳಿದ್ದಾರೆ.
ಅಲ್ಲದೆ, ಕರ್ನಾಟಕ ವಿಧಾನಮಂಡಲದ ವೇತನಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ(ಎರಡನೆ ತಿದ್ದುಪಡಿ) ಮಸೂದೆ, ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ(ನಿಯಂತ್ರಣ) ಪ್ರಾಧಿಕಾರ ಮಸೂದೆ ಸೇರಿದಂತೆ ಒಟ್ಟು 16 ಮಸೂದೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತದೆ.
ಅಧಿವೇಶನದ ವರದಿಗಾಗಿ ಆಗಮಿಸಲಿರುವ ಪತ್ರಕರ್ತರಿಗೆ ಅನುಕೂಲವಾಗುವಂತೆ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದ್ದು, 16 ಕಂಪ್ಯೂಟರ್‌ಗಳು, ಇಂಟರ್‌ನೆಟ್ ಸಂಪರ್ಕ, ಫ್ಯಾಕ್ಸ್ ಹಾಗೂ ದೂರವಾಣಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications