ಓವರ್ ಟೇಕ್ ಹುಚ್ಚು: ಮ್ಯಾಕ್ಸಿಕ್ಯಾಬಿನ 11 ಮಂದಿ ಸಾವು

ಅಪಘಾತದ ತೀವ್ರತೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಘಟನಾ ಸ್ಥಳದಲ್ಲಿ ಬೆಳಕು ಇಲ್ಲದ ಕಾರಣ ಪರಿಹಾರ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಈ ಹಿಂದೆ ಅಪಘಾತ ವಲಯವೆಂದೇ ಪರಿಗಣಿತವಾಗಿದ್ಧ ಈ ಭಾಗದಲ್ಲಿ ರಸ್ತೆ ಸೌಕರ್ಯಗಳು ಸುಧಾರಿಸಿದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಅಂತಹ ಅಪಘಾತಗಳೇನೂ ಆಗುತ್ತಿರಲಿಲ್ಲ. ಆದರೆ
ನಿನ್ನೆ ರಾತ್ರಿ ಏನಾಯಿತೆಂದರೆ... ಚಿಂತಾಮಣಿ-ಬೆಂಗಳೂರು ಮಾರ್ಗದ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಡಿ. ಹೊಸಹಳ್ಳಿ ಬಳಿ ಕೆಎಸ್‌ಆರ್ ಟಿಸಿ ಬಸ್ ಮತ್ತು ಮ್ಯಾಕ್ಸಿ ಕ್ಯಾಬ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ಸು ಚಿಂತಾಮಣಿಯಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ಹೊರಟಿತ್ತು. ಡಿಕ್ಕಿಯ ರಭಸಕ್ಕೆ ಮ್ಯಾಕ್ಸಿಕ್ಯಾಬ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಮ್ಯಾಕ್ಸಿ ಕ್ಯಾಬ್ ವೇಗವಾಗಿ ಚಲಿಸುತ್ತಿತ್ತು. ಅದೇ ಸ್ಫಿಡಿನಲ್ಲಿ ಕ್ಯಾಬಿನ ಚಾಲಕ ಎದುರಿಗಿದ್ದ ಮಾರುತಿ ವ್ಯಾನನ್ನು ಹಿಂದಿಕ್ಕಲು ಮುಂದಾಗಿದ್ದಾನೆ. ಆದರೆ ನಿಯಂತ್ರಣ ತಪ್ಪಿದೆ. ಜತೆಗೆ ಎದುರು ದಿಕ್ಕಿನಲ್ಲಿ ಕೆಎಸ್‌ಆರ್ ಟಿಸಿ ಬಸ್ಸು ಬಂದಿದೆ. ಅಷ್ಟೇ, ಮ್ಯಾಕ್ಸಿ ಕ್ಯಾಬ್ ಮತ್ತು ಬಸ್ಸು ಮುಖಾಮುಖಿಯಾಗಿದೆ. ಕ್ಯಾಬಿನ ಚಾಲಕ ಮಹದೇವಯ್ಯ (45) ಸ್ಥಳದಲ್ಲೇ ಸತ್ತಿದ್ದಾನೆ.
ಮೃತರ ಹೆಸರುಗಳು: ಮೃತರಲ್ಲಿ ಐವರು ಮಹಿಳೆಯರು ಹಾಗೂ ಆರು ಮಂದಿ ಪುರುಷರು ಸೇರಿದ್ದಾರೆ. ನಂದಗುಡಿಯ ಗುನ್ ಸಾದ್ (40), ಮಹದೇವ, ಪವಿತ್ರಾ (19), ಶಿಡ್ಲಘಟ್ಟ ತಾಲ್ಲೂಕಿನ ಲೋಕೇಶ್ (14), ರಾಮಪ್ಪ, ಕೆಂಪಣ್ಣ, ನಾರಾಯಣಸ್ವಾಮಿ, ಕೋಲಾರ ತಾಲ್ಲೂಕಿನ ಕುರುಗಲ್ ಗ್ರಾಮದ ಗೌರಮ್ಮ (25), ರಾಧಾ (18) ಮತ್ತು ಪುಷ್ಪಾ (20) ಮೃತಪಟ್ಟವರು. ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ. ಮೃತರು ಮತ್ತು ಗಾಯಾಳುಗಳಲ್ಲಿ ಹೆಚ್ಚಿನವರು ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಕಾರ್ಮಿಕರಾಗಿದ್ದಾರೆ.












Click it and Unblock the Notifications