ಚಿದಂಬರಂ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಸಾಧ್ಯತೆ

'ಆಡ್ವಾಣಿ ತಮ್ಮ ಪ್ರಧಾನಿ ಕನಸನ್ನು ಬಿಟ್ಟುಬಿಟ್ಟರೇ? ಪ್ರಧಾನಿಯಾಗುತ್ತೇನೆ ಎಂಬ ಭರವಸೆಯನ್ನೇ ಕಳೆದುಕೊಂಡುಬಿಟ್ಟರಾ?' ಎಂದು ಕಾಂಗ್ರೆಸ್ ವಕ್ತಾರ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಆಡ್ವಾಣಿಯ ಕಾಲೆಳೆದಿದ್ದಾರೆ.
ಇನ್ನು ಬ್ರಿಟನ್ನಿನ The Economist ಪತ್ರಿಕೆಯು ಭಾರತದ ಭವಿಷ್ಯದ ಪ್ರಧಾನಿಯೊಬ್ಬರ ಬಗ್ಗೆ ಸ್ವಾರಸ್ಯಕರ ವರದಿ ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷವು ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಈಗಿನ ಗೃಹ ಸಚಿವ ಪಿ ಚಿದಂಬರಂ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿ ಮಾಡಿದೆ.
ಗಮಮನಾರ್ಹವೆಂದರೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಕಟಿಸಿದರೆ ಅವರನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಚಿದಂಬರಂಗೆ ಮಣೆ ಹಾಕುವ ಇಂಗಿತ ಹೊಂದಿದೆ ಎಂದು ಪತ್ರಿಕೆ ಹೇಳಿದೆ. ಕಾಕತಾಳೀಯವೆಂಬಂತೆ ಮೋದಿ ಅಧಿಕೃತ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿಯಾಗಿದೆ.
ವರದಿಯ ಪ್ರಮುಖಾಂಶಗಳು:
ಕಾಂಗ್ರೆಸ್ ಪಕ್ಷವು ಯುವನಾಯಕ ರಾಹುಲ್ ಗಾಂಧಿಯ ಹೆಸರು ಎತ್ತದೇ ಚಿದಂಬರಂ ಅವರ ಹೆಸರನ್ನು ತೇಲಿಬಿಟ್ಟಿದೆ. ಹಣಕಾಸು ಸಚಿವರಾಗಿ ಮತ್ತೆ ಕೇಂದ್ರ ಸಂಪುಟದಲ್ಲಿ ಕಾಣಿಸಿಕೊಂಡ ನಂತರ ಚಿದುಗೆ ಅದೃಷ್ಟ ಭಾಗ್ಯ ಖುಲಾಯಿಸಿದೆ. ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತೆ ಚಿದು ಆರ್ಥಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಜತೆಗೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒಲವನ್ನು ಸಂಪಾದಿಸಿದ್ದಾರೆ.
ಮನಮೋಹನ್ ಸಿಂಗ್ 80ರ ಗಡಿಯಲ್ಲಿದ್ದಾರೆ. ರಾಹುಲ್ ರಾಜಕೀಯದಲ್ಲಿ ಇನ್ನೂ ಪರಿಪಕ್ವವಾಗಿಲ್ಲ. ಜತೆಗೆ ರಾಹುಲ್ ಗೊಂದಲದ ಗೂಡಿನಲ್ಲಿದ್ದಾರೆ. ರಾಹುಲ್, ಅಧಿಕಾರಕ್ಕೆ ಅಂಟಿಕೊಳ್ಳುವ ಮನೋಭಾವ ಹೊಂದಿಲ್ಲ. ಜತೆಗೆ ಅವರಿಗೆ ನಾಚಿಕೆ ಸ್ವಭಾವವವೂ ಇದೆ. ಜನರೊಂದಿಗೆ ಬೆರೆಯುವುದಿಲ್ಲ. ಸಂಸತ್ತಿನಲ್ಲಿ ಧ್ವನಿಯೆತ್ತಿ ಮಾತನಾಡುವುದೂ ಇಲ್ಲ. ಇವರ ನಡುವೆ ರಾಜಕೀಯ ಮುತ್ಸದ್ದಿ ಚಿದು ಅರ್ಹ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಾರೆ.
ಕಾಂಗ್ರೆಸ್ ಲೆಕ್ಕಾಚಾರವೇನು? ಗಂಭೀರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ಮುಂದಿನ ಸಾರ್ವತ್ರಿಕ ಚುನಾವಣೆಗಳ ಬಳಿಕ ಪಕ್ಷದ ಬಹುತೇಕ ಹೊಣೆಗಳನ್ನು ಮಗನಿಗೆ ವಹಿಸಿಕೊಡುವ ಆಲೋಚನೆಯಲ್ಲಿದ್ದಾರೆ. ಅರ್ಥಾತ್ ಚಿದಂಬರಂ ಅವರನ್ನು ಪ್ರಧಾನಿ ಸ್ಥಾನದಲ್ಲಿ ಪ್ರತಿಷ್ಠಾಪಿಸಿದರೂ ಈಗಿನ ಪ್ರಧಾನಿ ಮನಮೋಹನ್ ಸಿಂಗ್ ಮಾದರಿಯಲ್ಲೇ ಪಕ್ಷವೇ ರಾಹುಲ್ ಗಾಂಧಿ ಮುಖಾಂತರ ಸರಕಾರವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ ಎನ್ನಲಾಗಿದೆ.












Click it and Unblock the Notifications