ಮೇಲ್ಸೇತುವೆ ಕೆಳಗೆ ಕಸ ತುಂಬಿ ಎಂದ ಮೇಯರ್!

ಮೇಯರ್ ಡಿ ವೆಂಕಟೇಶ್ ಮೂರ್ತಿ ಅವರ ಹೇಳಿಕೆ ಕೇಳಿ ಬೆಂಗಳೂರಿಗರು ಬೆಚ್ಚಿ ಬೀಳುವುದೊಂದೆ ಬಾಕಿ. ಮೇಯರ್ ಸಾಹೇಬ್ರು ತಮಾಷೆಗಾಗಿ ಈ ರೀತಿ ಹೇಳಿಲ್ಲ.
ಲಭ್ಯ ಮಾಹಿತಿ ಪ್ರಕಾರ ಎಲ್ಲಾ ಫ್ಲೈಓವರ್ ಗಳ ಕೆಳಗೆ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ಇಡಲು ಮೇಯರ್ ವೆಂಕಟೇಶ್ ಅವರು ಪಾಲಿಕೆಗೆ ಆದೇಶಿಸಿದ್ದಾರೆ.
ಅಲ್ಲಾ ಸಾರ್ ಇದರಿಂದ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರೆ, ಅದಕ್ಕೂ ಉಪಾಯ ಕಂಡುಕೊಂಡಿದ್ದಾರೆ ನಮ್ಮ ಮೇಯರ್.
ತ್ಯಾಜ್ಯ ಘಟಕಗಳನ್ನು ಇಟ್ಟಮೇಲೆ ಮೇಲ್ಸೇತುವೆ ಕೆಳಭಾಗದಲ್ಲಿ ಗೋಡೆ ಮೇಲಕ್ಕೇರಲಿದೆ. ಇದು ಕಸದ ರಾಶಿಯನ್ನು ಮುಚ್ಚಲಿದೆ. ಈ ಗೋಡೆಗಳನ್ನು ಜಾಹೀರಾತು ಹಾಕಲು ಬಳಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.
ಹಲವೆಡೆ ಫ್ಲೈ ಓವರ್ ಕೆಳಗಿನ ಜಾಗ ಬಳಕೆಯಾಗದೆ ವ್ಯರ್ಥವಾಗುತ್ತಿದೆ ಎಂದು ನಾಗರೀಕರು ದೂರಿದ್ದನ್ನು ಗಮನದಲ್ಲಿಟ್ಟುಕೊಂಡು ಖಾಲಿ ಇರುವ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ಬಿಬಿಎಂಪಿ ಈ ರೀತಿ ಐನಾತಿ ಐಡಿಯಾ ಮಾಡಿದೆ ಎನ್ನಲಾಗಿದೆ.
ಘನ ತ್ಯಾಜ್ಯ ನಿರ್ವಹಣೆ(SWM) ಬಗ್ಗೆ ಆಯುಕ್ತ ರಜನೀಶ್ ಗೋಯಲ್ ಹಾಗೂ ಮೇಯರ್ ಅವರು ಇತರೆ ಸದಸ್ಯರೊಡನೆ ಚರ್ಚೆ ನಡೆಸಿ ಈ ರೀತಿ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಮೇಯರ್ ಅವರು ವಲಯವಾರು ಆಯುಕ್ತರಿಗೆ ಮೈಸೂರು ರಸ್ತೆ, ಕೊರಟಗೆರೆ, ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಿ ಸೂಕ್ತ ಖಾಲಿ ಜಾಗಗಳನ್ನು ಹುಡುಕಿ ಕಸ ಹಾಕುವಂತೆ ಮೇಯರ್ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು 2,700 ಕೋಟಿ ರೂ. ಅಂದಾಜು ವೆಚ್ಚದಲ್ಲಿ 400 ಎಕರೆ ಜಮೀನು ಖರೀದಿಸಲು ತೀರ್ಮಾನಿಸಲಾಗಿತ್ತು. ಇದಲ್ಲದೆ ಸುಮಾರು 215 ಎಕರೆಯಷ್ಟು ಜಾಗವನ್ನು ಬಿಎಂಟಿಸಿ ನೀಡಿದ್ದು, ಬಿಬಿಎಂಪಿಗೆ 1 ಕೋಟಿ ರೂ. ನೀಡಲಿದೆ. ಆದರೆ, ಈ ಪ್ರಕ್ರಿಯೆಗಳು ಜಾರಿಗೆ ಬರಲು ತಿಂಗಳುಗಟ್ಟಲೆ ಕಾಯಬೇಕಾಗಿದೆ.
ಚಿಕ್ಕಬಳ್ಳಾಪುರದ ಹೊರವಲಯದಲ್ಲಿ 400 ಎಕರೆ ಜಮೀನನ್ನು ಕಸ ವಿಲೇವಾರಿಗೆ ನಿಗದಿಪಡಿಸಲಾಗಿತ್ತು. ಹಾಗೆಯೆ, 300 ಕೋಟಿ ರು. ವೆಚ್ಚದಲ್ಲಿ 80 ಘನ ತ್ಯಾಜ್ಯ ವಿಲೇವಾರಿ ಯೋಜನೆಗಳಿಗೆ ಬಿಬಿಎಂಪಿ ಒಪ್ಪಿಗೆ ನೀಡಲಾಗಿತ್ತು. ಆದರೆ, ಹೊಸ ಗುತ್ತಿಗೆದಾರರ ಆಯ್ಕೆಯಾಗದ ಕಾರಣ ಎಲ್ಲವೂ ಕುಂಠಿತವಾಗಿತ್ತು.












Click it and Unblock the Notifications