ಶೆಟ್ಟರ್-ಜಯಾ ಟೀ ಕುಡಿದು ಮಾತನಾಡಲಿ

Shettar and Jayalalithaa
ನವದೆಹಲಿ,ನ.26: ಕಾವೇರಿ ನದಿ ನೀರು ಹಂಚಿಕೆ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಜೊತೆ ಕೂತು ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಸುಪ್ರೀಂಕೋರ್ಟ್ ಸೋಮವಾರ(ನ.26) ಆದೇಶ ಹೊರಡಿಸಿದೆ.

ಎರಡು ರಾಜ್ಯಗಳ ರೈತರ ಹಿತದೃಷ್ಟಿಯಿಂದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಜಸ್ಟೀಸ್ ಡಿಕೆ ಜೈನ್ ಹಾಗೂ ಜಸ್ಟೀಸ್ ಮದನ್ ಬಿ. ಲಾಕೂರ್ ಅವರಿದ್ದ ಸುಪ್ರೀಂ ನ್ಯಾಯಪೀಠ ಹೇಳಿದೆ.

ಎರಡು ರಾಜ್ಯದ ಮುಖ್ಯಮಂತ್ರಿಗಳು ಸುಮ್ಮನೆ ಜೊತೆಗೆ ಕೂತು ಕಾಫಿ ಕುಡಿಯುವುದಾದರೆ ಬೇಡ. ಸಮಸ್ಯೆ ಬಗೆಹರಿಸುವತ್ತ ಚರ್ಚೆ ನಡೆಸಲಿ ಎಂದು ನ್ಯಾಯಪೀಠ ಸೂಚಿಸಿದೆ.

ಕರ್ನಾಟಕ ಪರ ವಕೀಲ ಫಾಲಿ ಎಸ್ ನಾರಿಮನ್ ಅವರು ನ್ಯಾಯಪೀಠದ ಆದೇಶವನ್ನು ಸ್ವಾಗತಿಸಿದ್ದಾರೆ. ಜಗದೀಶ್ ಶೆಟ್ಟರ್ ಅವ್ಅರು ಜಯಲಲಿತಾ ಅವರ ಜೊತೆ ಮಾತುಕತೆ ನಡೆಸಲು ಸಿದ್ಧವಿದ್ದಾರೆ ಎಂದು ಹೇಳಿದರು. ಆದರೆ, ತಮಿಳುನಾಡು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ.

ಸೆ.19ರಂದು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 9000 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಆದೇಶ ನೀಡಲಾಗಿತ್ತು.

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ.30ಕ್ಕೆ ಮುಂದೂಡಿದೆ.

ಇತ್ತೀಚೆಗೆ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ ಉಂಟಾಗಿತ್ತು. ನ.15 ರಂದು ನಡೆದ ಕಾವೇರಿ ಮೇಲುಸ್ತುವಾರಿ ಸಭೆಯಲ್ಲಿ ತಮಿಳುನಾಡು ಪರ ತೀರ್ಪು ಹೊರಬಿದ್ದಿತ್ತು.

ನ.15 ರಿಂದ ನ.30 ರವರೆಗೆ ತಮಿಳುನಾಡಿಗೆ ಸುಮಾರು 4.5 ಟಿಎಂಸಿ ಅಡಿ ಗಳಷ್ಟು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ(ಸಿಎಂಸಿ ) ಆದೇಶ ನೀಡಿತ್ತು.

ಇದಕ್ಕೂ ಮುನ್ನ ಅಕ್ಟೋಬರ್ 31 ರಂದು ನಡೆದ ಸಭೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆ ಉಂಟಾಗಿತ್ತು. ಒಟ್ಟಾರೆ 5.5 ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. ನ.15ರೊಳಗೆ 4 ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕು ಎಂದು ಸೂಚಿಸಲಾಗಿತ್ತು.

ಆದರೆ, ಸಭೆಯಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರು ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಇದೆ. ಅಕಾಲಿಕ ಚಂಡಮಾರುತ ಪರೋಕ್ಷವಾಗಿ ಕೃಷಿಕರಿಗೆ ಹೊಡೆತ ಕೊಟ್ಟಿದೆ ಎಂದು ಖಡಾಖಂಡಿತವಾಗಿ ಹೇಳಿದ್ದರು.

ಸೆ.19ರ ಸಿಎಆರ್ ಸಭೆ ಆದೇಶದ ನಂತರ ಈವರೆಗೂ ತಮಿಳುನಾಡಿಗೆ ಸುಮಾರು 13, 000 ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ನಡುವೆ ತಿಕ್ಕಾಟ ಇನ್ನೂ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+