ಪತಿ ಮಸೀದಿಗೆ ಹೋದಾಗ ಒಬ್ಬಂಟಿ ಮಹಿಳೆ ಹತ್ಯೆ

ಇತ್ತೀಚಿನ ದಿನಗಳಲ್ಲಿ ರಾಜಧಾನಿಯಲ್ಲಿ ಕೊಲೆ/ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಸತತವಾಗಿ ಅಗ್ನಿಪರೀಕ್ಷೆಗೊಳಗಾಗುತ್ತಿರುವ ಬೆಂಗಳೂರು ಪೊಲೀಸರಿಗೆ ಇದು ಮತ್ತೊಂದು ಸವಾಲಾಗಿದೆ. ಮಹಿಳೆಯ ಕೊಲೆ ಮೇಲ್ನೋಟಕ್ಕೆ ಪರಿಚಿತರೇ ಆಭರಣಗಳ ಆಸೆಗಾಗಿ ಮಾಡಿರಬಹುದೆಂದು ಶಂಕಿಸಲಾಗಿದ್ದು, ಮತ್ತೊಂದು ಕೊಲೆ ಪ್ರಕರಣ ನಿಗೂಢವಾಗಿದೆ.
ರೂಪೇನಾ ಅಗ್ರಹಾರ ಬಳಿಯ ಎಂಜಿಆರ್ ಲೇಔಟ್ ನಿವಾಸಿ ಎಸ್ಎಸ್ ಬಾಬು ಎಂಬುವರ ಪತ್ನಿ ಜಬೀನ್ ತಾಜ್ (32) ಕೊಲೆಯಾದವರು. 17 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗೆ ನದೀಂ (16) ಮತ್ತು ಸಲೀಂ (14) ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 10 ಮನೆಗಳನ್ನು ಬಾಡಿಗೆ ಕೊಟ್ಟಿರುವ ಬಾಬು, ಬಾಡಿಗೆ ಹಣದಲ್ಲೇ ಜೀವನ ನಡೆಸುತ್ತಿದ್ದಾರೆ.
ಆಭರಣ ವ್ಯಾಮೋಹದಿಂದ ಜೀವಕ್ಕೆ ಕುತ್ತು? ಕೊಲೆಯಾದ ಜಬೀನ್ ಗೆ ಚಿನ್ನಾಭರಣದ ಮೇಲೆ ತೀವ್ರ ವ್ಯಾಮೋಹವಿತ್ತು. ಮೈಮೇಲೆ ಸಿಕ್ಕಾಪಟ್ಟೆ ಒಡವೆಗಳನ್ನು ಹಾಕಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಚಿನ್ನಾಭರಣದ ಆಸೆಗಾಗಿ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಜಬಿನಾ ಅವರ ಮನೆಗೆ ಬಂದ ದುಷ್ಕರ್ಮಿಗಳು, ಕೈಕಾಲು ಕಟ್ಟಿ ಹಾಕಿ ಮತ್ತು ಮುಖಕ್ಕೆ ಟವೆಲ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಮೇರಾದಲ್ಲಿದ್ದ 40 ಸಾವಿರ ನಗದು ಸೇರಿದಂತೆ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಾರ್ಥನೆ ಮಾಡುವ ಸಲುವಾಗಿ ಮಧ್ಯಾಹ್ನ ಮಗ ನದೀಂನನ್ನು ಕರೆದುಕೊಂಡು ಮಸೀದಿಗೆ ಹೋಗಿದ್ದೆ. ಸಲೀಂ ಕೂಡ ಶಾಲೆಗೆ ಹೋಗಿದ್ದ. ಪ್ರಾರ್ಥನೆ ಮುಗಿಸಿ 2.15ಕ್ಕೆ ಮನೆಗೆ ಬಂದಾಗ ಕೈಕಾಲುಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ನಿ ಬಿದ್ದಿದ್ದಳು. ಗಾಬರಿಯಿಂದ ಹತ್ತಿರ ಹೋಗಿ ನೋಡಿದಾಗ ಆಕೆ ಜೀವಂತವಾಗಿರಲಿಲ್ಲ ಎಂದು ಬಾಬು ಹೇಳಿದ್ದಾರೆ.
ಆಟೋ ಚಾಲಕ ಬಾಬು ಹತ್ಯೆ: ಜಗಜೀವನರಾಂನಗರದ ಪಾದರಾಯನಪುರ ನಿವಾಸಿ ಬಾಬು (34) ಎಂಬುವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಆಟೋ ಚಾಲಕರಾಗಿದ್ದ ಬಾಬು ಅವರು ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಂದ್ರಾ ಲೇಔಟ್‌ನ ಗಂಗೊಂಡನಹಳ್ಳಿ ಉದ್ಯಾನದ ಬಳಿ ಆಟೋದಲ್ಲಿ ವ್ಯಕ್ತಿಯೊಬ್ಬರ ಶವ ಇರುವುದನ್ನು ನೋಡಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು ಎಂದು ಚಂದ್ರಾಲೇಔಟ್ ಪೊಲೀಸರು ಹೇಳಿದ್ದಾರೆ.
ದುಷ್ಕರ್ಮಿಗಳು ಬೇರೊಂದು ಸ್ಥಳದಲ್ಲಿ ಬಾಬು ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಆಟೊದಲ್ಲೇ ಶವವನ್ನು ಸಾಗಿಸಿ ತಂದು ಗಂಗೊಂಡನಹಳ್ಳಿ ಉದ್ಯಾನದ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications