ಲೈಂಗಿಕ ಕಿರುಕುಳ: ಸ್ವಘೋಷಿತ ದೇವಮಾನವ ಸೆರೆ

ಇಲ್ಲಿನ ಭಾರತಿ ಧಾರ್ಮಿಕ ಆಶ್ರಮದ ಸ್ವಾಮಿ ಕೀರ್ತಿ ಬಂಧಿತ ಆರೋಪಿ. 40 ವರ್ಷದ ಸ್ವಾಮಿ ಕೀರ್ತಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆತನ ಭಕ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮರಾಜು ಅವರ ನಿಕಟ ಸಂಬಂಧಿ ಎಂದು ಸ್ವಾಮಿ ಕೀರ್ತಿ ಹೇಳಿಕೊಂಡಿದ್ದ.
ಲೈಂಗಿಕ ಕಿರುಕುಳದ ಜತೆಗೆ ತನಗೆ ಪ್ರಾಣ ಬೆದರಿಕೆಯೊಡ್ಡಿದ ಸ್ವಾಮಿ ಕೀರ್ತಿ, ಹಣವನ್ನೂ ಕೇಳಿದ್ದ ಎಂದು ಬಾಧಿತ ಮಹಿಳೆ ದೂರಿದ್ದಾರೆ ಎಂದು ಪದೇರುನ ಹೆಚ್ಚುವರಿ ಎಸ್ಪಿ ಎಆರ್ ದಾಮೋದರ್ ತಿಳಿಸಿದ್ದಾರೆ.
ಬಹಳಷ್ಟು ಕಾಲದಿಂದ ಕೀರ್ತಿ ಸ್ವಾಮಿಯ ಭಕ್ತಳಾಗಿರುವ ಬಾಧಿತ ಮಹಿಳೆ ಕಳೆದ ಆಗಸ್ಟಿನಲ್ಲಿ ತನ್ನ ಮೇಲೆ ಲೈಂಗಿಕ ದಬ್ಬಾಳಿಕೆ ನಡೆದಿರುವುದಾಗಿ ತಿಳಿಸಿದ್ದಾರೆ. ಆಶ್ರಮದಲ್ಲಿ ಇನ್ನೂ ಅನೇಕ ಮಹಿಳಾ ಭಕ್ತರ ಮೇಲೆ ಕೀರ್ತಿ ಸ್ವಾಮಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದೂ ಆಕೆ ಅಲವತ್ತುಕೊಂಡಿದ್ದಾರೆ.
ಬಾಧಿತ ಮಹಿಳೆಯ ದೂರಿನನ್ವಯ ಪೊಲೀಸರು ಕೀರ್ತಿ ಸ್ವಾಮಿಯ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಪದೇರು ಬಳಿ ವಂಟಡಪಲ್ಲಿ ಸಮೀಪ ಮೂರು ಎಕರೆ ಜಮೀನಿನಲ್ಲಿ ಕೀರ್ತಿ ಸ್ವಾಮಿ ತನ್ನ ಆಶ್ರಮ ಸ್ಥಾಪಿಸಿದ್ದ.
ಮೂಲತಃ ವಿಶಾಖಪಟ್ಟಣದ ಮರ್ರಿಪಲಂ ಭಾಗದ ಕೀರ್ತಿ ಸ್ವಾಮಿ, ಸುಮಾರು 10 ವರ್ಷಗಳ ಹಿಂದೆ ಪದೇರುಗೆ ಬಂದು ತಾನು ದೇವಮಾನವ ಎಂದು ಸ್ವಯಂಘೋಷಿಸಿಕೊಂಡಿದ್ದ. ಮುಂದೆ ಆಶ್ರಮ ಸ್ಥಾಪಿಸಿಕೊಂಡು ತನ್ನಲ್ಲಿರುವ ದಿವ್ಯಶಕ್ತಿಯಿಂದ ಜನರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದಾಗಿ ಜನರನ್ನು ನಂಬಿಸತೊಡಗಿದ್ದ ಎನ್ನಲಾಗಿದೆ.












Click it and Unblock the Notifications