KGFನಲ್ಲಿ ಪರಮಾಣು ತ್ಯಾಜ್ಯ ಸುರಿಯೋಲ್ಲ: ಪ್ರಧಾನಿ

ತಮಿಳನಾಡಿನ ಕೂಡಂಕೊಳಂ ಅಣು ವಿದ್ಯುತ್ ಸ್ಥಾವರ ತ್ಯಾಜ್ಯವನ್ನು ಪಾಳುಬಿದ್ದಿರುವ KGFನಲ್ಲಿ ಹಾಕಲಾಗುವುದು ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಮೂಲಕ ಕೇಂದ್ರ ಸರಕಾರ ತಿಳಿಸಿತ್ತು. ಆದರೆ ಆ ಬಗ್ಗೆ ಯಾವುದೇ ಪ್ರಸ್ತಾವನೆಯನ್ನೂ ಮಾಡಿಲ್ಲ ಎಂದು 'ಕೈ'ತೊಳೆದುಕೊಳ್ಳಲು ಯುಪಿಎ ಸರಕಾರ ಪ್ರಯತ್ನಿಸಿತ್ತು.
ಇದಕ್ಕೆ KGF ಸೇರಿದಂತೆ ಎಲ್ಲೆಡೆಯಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಪ್ರಧಾನಿ ಕಚೇರಿಯು ಕೆಜಿಎಫ್ ನಲ್ಲಿ ವಿಷಾಣು ತ್ಯಾಜ್ಯ ಸುರಿಯೋಲ್ಲ ಎಂದು ಇಂದು ಶನಿವಾರ (ನ .24) ಸ್ಪಷ್ಟಪಡಿಸಿದೆ.
ಕೂಡಂಗುಳಂ ಅಣು ಸ್ಥಾವರದ ತ್ಯಾಜ್ಯವನ್ನು ಕೋಲಾರದ ಚಿನ್ನದ ಗಣಿಯಲ್ಲಿ ಸುರಿಯುವ ಯೋಜನೆ ಇಲ್ಲ ಎಂದು ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ವಿ ನಾರಾಯಣಸ್ವಾಮಿ ಈ ಸ್ಪಷ್ಟನೆ ನೀಡಿದ್ದಾರೆ.
ಕೂಡಂಗುಳಂ ಅಣು ವಿದ್ಯುತ್ ಸ್ಥಾವರದ ತ್ಯಾಜ್ಯವನ್ನು ಕೋಲಾರದ ಚಿನ್ನದ ಗಣಿಯಲ್ಲಿ ಸುರಿಯಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರುಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
'ಅಣು ತ್ಯಾಜ್ಯವನ್ನು ಕೆಜಿಎಫ್‌ನಲ್ಲಿ ಸುರಿಯುವುದಿಲ್ಲ. ಕೋಲಾರದವರೇ ಆಗಿರುವ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೂ ಚರ್ಚಿಸಿದ್ದೇನೆ. ಅಣು ವಿದ್ಯುತ್ ಸ್ಥಾವರದ ಯುರೇನಿಯಂ ತ್ಯಾಜ್ಯವನ್ನು ಕೋಲಾರದಲ್ಲಿ ಸುರಿಯಲಾಗುವುದಿಲ್ಲ ಎಂದು ತಾನು ಖಚಿತಪಡಿಸುವುದಾಗಿ' ಸಚಿವ ವಿ ನಾರಾಯಣಸ್ವಾಮಿ ಹೇಳಿದರು.
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವುದನ್ನು ಖಂಡಿಸಿ ನ. 23 ಶುಕ್ರವಾರ ಜೆಡಿಎಸ್, ಬಿಜೆಪಿ ಕೆಜಿಎಫ್ ಬಂದ್ ನಡೆಸಿದ್ದವು.












Click it and Unblock the Notifications