ಬನಶಂಕರಿ : ಪಬ್ಲಿಕ್ ಮುಂದೆ ಉದ್ಯಮಿಯನ್ನು ಕೊಚ್ಚಿ ಕೊಂದ್ರು

ಬನಶಂಕರಿ ಸೇವಾಕ್ಷೇತ್ರ ಆಸ್ಪತ್ರೆ ಮುಂದಿನ ಜನನಿಬಿಡ ರಸ್ತೆಯಲ್ಲಿ ಈ ಕೊಲೆ ನಡೆದಿದೆ. ಸುಮಾರು 4 ರಿಂದ 5 ಜನ ಉದ್ಯಮಿ ಶ್ರೀನಿವಾಸ್ ಅವರನ್ನು ಕೊಂದು ಪರಾರಿಯಾಗಿದ್ದಾರೆ. ಪ್ರತ್ಯಕ್ಷದರ್ಶಿಗಳು ಸಹಾಯಕ್ಕೆ ಧಾವಿಸುವಷ್ಟರಲ್ಲಿ ಶ್ರೀನಿವಾಸ್ ಅರೆ ಜೀವವಾಗಿದ್ದರು ಎನ್ನಲಾಗಿದೆ.
ತಕ್ಷಣವೇ ಸೇವಾಕ್ಷೇತ್ರ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಆದರೆ, ತೀವ್ರವಾಗಿ ರಕ್ತಸ್ರಾವವಾಗಿದ್ದರಿಂದ ಶ್ರೀನಿವಾಸ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಬನಶಂಕರಿ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
ಘಟನೆ ವಿವರ: ಆನೇಕಲ್ ಮೂಲದ ಬೆಸ್ತಮಾರನಹಳ್ಳಿಯ 30 ವರ್ಷ ವಯಸ್ಸಿನ ಶ್ರೀನಿವಾಸ್ ಅವರು ಬನಶಂಕರಿ ಬಿಡಿಎ ಪಾರ್ಕ್ ಬಳಿ ನಿವಾಸಿಯಾಗಿದ್ದಾರೆ.
ಶನಿವಾರ ಬೆಳಗ್ಗೆ ಸುಮಾರು 10.30 ರ ಸುಮಾರಿಗೆ ತಮ್ಮ ನಿವಾಸದ ಬಳಿ ಮೊಬೈಲ್ ನಲ್ಲಿ ಜೋರು ಜೋರಾಗಿ ಮಾತಾಡಿಕೊಂಡು ಟಿವಿಎಸ್ ಬೈಕ್ ತೆಗೆದುಕೊಂಡು ಸೇವಾ ಕ್ಷೇತ್ರ ಆಸ್ಪತ್ರೆಗೆ ಕಡೆಗೆ ಬಂದಿದ್ದಾರೆ.
ಆಸ್ಪತ್ರೆ ಬಳಿಗೆ ಬರುವಷ್ಟರಲ್ಲಿ ಮತ್ತೊಂದು ಮೊಬೈಲ್ ಕರೆ ಬಂದಿದೆ. ಬೈಕ್ ಪಕ್ಕಕ್ಕೆ ನಿಲ್ಲಿಸಿ ಕರೆ ಸ್ವೀಕರಿಸಲು ಮುಂದಾದ ಸಮಯದಲ್ಲಿ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ಆಟೋರಿಕ್ಷಾದಲ್ಲಿ ಬಂದಿದ್ದ ಸುಮಾರು ನಾಲ್ಕೈದು ಮಂದಿ ಲಾಂಗ್ ಮಚ್ಚುಗಳಿಂದ ಕೊಚ್ಚುವುದನ್ನು ನೋಡಿದರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದ ಸಾರ್ವಜನಿಕರು ಈ ಘಟನೆಯಿಂದ ಬೆಚ್ಚಿದ್ದಾರೆ.
ಸಿನೀಮಯ ರೀತಿಯಲ್ಲಿ ನಡೆದ ಈ ಘಟನೆಯಿಂದ ವಿಚಲಿತರಾದ ಸಾರ್ವಜನಿಕರು ಶ್ರೀನಿವಾಸ್ ಸಹಾಯಕ್ಕೆ ಧಾವಿಸುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಊರಿನ ಜಮೀನು ವ್ಯವಹಾರದಲ್ಲಿ ಎದುರಾಳಿ ಗುಂಪಿನವರ ಜೊತೆ ಪೈಪೋಟಿಗೆ ಬಿದ್ದಿದ್ದ ಶ್ರೀನಿವಾಸ್ ಇತ್ತೀಚೆಗೆ ಸಣ್ಣ ಪ್ರಮಾಣದಲ್ಲಿ ಜಗಳ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪ್ರಣಬ್ ಮೊಹಾಂತಿ ಹೇಳಿದರು.
ಶ್ರೀನಿವಾಸ್ ಅವರು ಅನೇಕಲ್ ಬಳಿ ಸುಮಾರು 20 ಎಕರೆ ಜಮೀನು ಹೊಂದಿದ್ದಾರೆ. ಈ ಜಮೀನು ವ್ಯಾಜ್ಯವೇ ಅವರ ಸಾವಿಗೆ ಕಾರಣವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೂ ಇಳಿಯುವ ಮುನ್ನ ಶ್ರೀನಿವಾಸ್ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದರು. ಬನಶಂಕರಿ 2ನೇ ಹಂತದಲ್ಲಿ ಒಳ್ಳೆ ಹೆಸರು ಸಂಪಾದಿಸಿದ್ದರು ಎಂದು ತಿಳಿದು ಬಂದಿದೆ.
ಕಿಮ್ಸ್ ಆಸ್ಪತ್ರೆ ಬಳಿ ಶ್ರೀನಿವಾಸ್ ಅವರ ಕುಟುಂಬದವರು, ಸಂಬಂಧಿಕರು, ಸ್ನೇಹಿತ ವರ್ಗ ಜಮಾಯಿಸಿದ್ದರು. ನೂರಾರು ಜನ ಒಮ್ಮೆಗೆ ಆಸ್ಪತ್ರೆ ಬಳಿ ಧಾವಿಸಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ನ.5ರಿಂದ ನಗರದಲ್ಲಿ ನ.24ರವರೆ ಸುಮಾರು 15 ಕೊಲೆಗಳು ನಡೆದಿದೆ. ಆಸ್ತಿ ವಿವಾದ, ಅನೈತಿಕ ಸಂಬಂಧ, ದರೋಡೆ, ಹಳೆ ದ್ವೇಷ, ಕೌಟುಂಬಿಕ ಕಲಹ ಪ್ರಕರಣಗಳು ಕೊಲೆಗೆ ಕಾರಣವಾಗಿದೆ ಎಂದು ಬನಶಂಕರಿ ಠಾಣಾಧಿಕಾರಿ ವಿವರಿಸಿದರು.












Click it and Unblock the Notifications