ತಮಿಳುನಾಡು ವಿಷ; KGFನಲ್ಲಿ ಪ್ರತಿಭಟನೆ ಕಾವು ತೀವ್ರ
ಕೋಲಾರ, ನ.22: ಎಂದಿನಂತೆ ತಮಿಳುನಾಡಿಗೆ ನೆರವಾಗುವ ಧಾವಂತದಲ್ಲಿ ಕೇಂದ್ರ ಸರಕಾರ ಕೋಲಾರ ಜಿಲ್ಲೆಗೆ ಅಕ್ಷರಶಃ ವಿಷವುಣಿಸಲು ನಿರ್ಧರಿಸಿದೆ.
ತಮಿಳನಾಡಿನ ಜನತೆ ಬಿಲ್ಕುಲ್ ಬೇಡವೆಂದಿರುವ ಕೂಡಂಕೊಳಂ ಅಣುವಿದ್ಯುತ್ ಸ್ಥಾವರ ತ್ಯಾಜ್ಯವನ್ನು ಪಾಳುಬಿದ್ದಿರುವ KGFನಲ್ಲಿ ಹಾಕಲಾಗುವುದು ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಮೂಲಕವೇ ಕೇಂದ್ರವು ಬುಧವಾರ ತಿಳಿಸಿದೆ. ಇದರಿಂದ ಬೆಚ್ಚಿಬಿದ್ದಿರುವ ಕೋಲಾರದ ಜನತೆ ನಾಳೆಯಿಂದಲೇ ತೀವ್ರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಮಧ್ಯೆ, ಕೇಂದ್ರದಲ್ಲಿರುವ ಕೋಲಾರದ ಪ್ರಭಾವಿ ಸಚಿವ ಕೆಎಚ್ ಮುನಿಯಪ್ಪ 'ತನಗೇನೂ ಆ ವಿಷಯ ಗೊತ್ತೇ ಇಲ್ಲ. ಮಾಹಿತಿ ಕಲೆ ಹಾಕಿ ಅಧ್ಯಯನ ನಡೆಸಿದ ಬಳಿಕ ನನ್ನ ನಿಲುವು ಪ್ರಕಟಿಸುವುದಾಗಿ' ತಿಳಿಸಿದ್ದಾರೆ.
ಅಣುವಿದ್ಯುತ್ ಸ್ಥಾವರದ ತ್ಯಾಜ್ಯವೇ ವಿಷಯುಕ್ತ. ಸ್ವತಃ ಅದರ ಪ್ರಯೋಜನ ಪಡೆಯುವ ತಮಿಳುನಾಡೇ ತನಗೆ ತ್ಯಾಜ್ಯದ ಊಸಾಬರಿ ಬೇಡವೆಂದಿದೆ. ಹಾಗಿರುವಾಗ ಸಚಿವ ಮುನಿಯಪ್ಪ ಇನ್ನೂ ಅಧ್ಯಯನ ಮಾಡಬೇಕಂತೆ... ಕೊಳ್ಳೆ ಹೊಡೆದ ಮೇಲೆ ದಿಡ್ಡಿಬಾಗಿಲು ಹಾಕುವುದು ಬೇಡ. ಮುನಿಯಪ್ಪ ಕೇಂದ್ರದಲ್ಲಿ ತಮ್ಮ ಅಧಿಕಾರ/ಪ್ರಭಾವವನ್ನು ಬಳಸಿ, ತಕ್ಷಣ ಯೋಜನೆಯನ್ನು ಕೈಬಿಡುವಂತೆ ಮಾಡಬೇಕು ಎಂದು ಕೋಲಾರದ ಆಗ್ರಹಿಸಿದ್ದಾರೆ.
ಕೋಲಾರ ಜಿಲ್ಲೆಗೆ ಕೊಳ್ಳಿ: 12 ವರ್ಷಗಳ ಹಿಂದೆ KGF ಚಿನ್ನದ ಗಣಿಗೆ ಚರಮಗೀತೆ ಹಾಡಿದ ಕೇಂದ್ರ ಸರ್ಕಾರವು ಅದರ ಪುನರ್ವಸತಿ ಬಗ್ಗೆ ಮರೆತುಹೋಗಿದೆ. ಈಗ ಕೆಜೆಎಫ್ ನೆಲವನ್ನು ಮತ್ತೊಮ್ಮೆ ಹಾಳು ಮಾಡಿ ಅದನ್ನು ಮತ್ತಷ್ಟು ಹಳ್ಳಹಿಡಿಸುವ ದೂರಾಲೋಚನೆ ನಡೆಸಿದೆ. ಚಿನ್ನದ ಗಣಿಗೆ ಸೇರಿದ 12,000 ಎಕರೆ ವಿಶಾಲ ಭೂಮಿ ಲಭ್ಯವಿದೆ. ಆದ್ದರಿಂದ ಅದು ಅಣು ತ್ಯಾಜ್ಯ ವಿಲೇವಾರಿಗೆ ಪ್ರಶಸ್ತ ಸ್ಥಳವಾಗಿದೆ ಎಂಬುದು ಕೇಂದ್ರದ ಲೆಕ್ಕಾಚಾರ.
ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಅಂತರ್ಜಲ ಪಾತಾಳ ಕಚ್ಚಿದೆ. ಸಿಗುವ ಅಲ್ಪಸ್ವಲ್ಪ ನೀರಿನ ಮೂಲಗಳು ನೈಟ್ರೇಟ್, ಫ್ಲೋರೈಡ್, ಯುರೇನಿಯಂಗಳ ಗಣಿಗಳಾಗಿ ಪರಿವರ್ತನೆಗೊಂಡಿವೆ. ಪರಿಸ್ಥಿತಿ ಹೀಗಿರುವಾಗ ಮತ್ತೆ ಅಣು ತ್ಯಾಜ್ಯ ಸುರಿದು ಕೋಲಾರಕ್ಕೆ ವಿಷಪ್ರಾಶನ ಮಾಡುವುದ ಸರ್ವಥಾ ಸಾಧುವಲ್ಲ ಎಂದು ಜಿಲ್ಲೆಯ ಜನ ಬೊಬ್ಬಿಡುತ್ತಿದ್ದಾರೆ. ಕೇಂದ್ರಕ್ಕೆ ಈ ಕೂಗು ಕೇಳಿಸುತ್ತಿದೆಯೇ?












Click it and Unblock the Notifications