ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಈಶ್ವರಪ್ಪ ನೇರ-ಸರಳ ಸವಾಲು

By Srinath
|
Google Oneindia Kannada News

bsy-should-show-strength-in-assembly-election-eshwarappa
ಚಿತ್ರದುರ್ಗ, ನ.20: 'ಯಡಿಯೂರಪ್ನೋರೆ ಚುನಾವಣೇಲಿ ನಿಮ್ಮ ಪ್ರತಾಪ ತೋರಿಸಿ' ಎಂದು ಕೆಎಸ್ ಈಶ್ವರಪ್ಪ ಅವರು ತಮ್ಮ 'ಜಿಲ್ಲಾ ಗೆಳೆಯ'ನಿಗೆ ನೇರ, ಸರಳ ಸವಾಲು ಹಾಕಿದ್ದಾರೆ.

ಬಿಜೆಪಿಯ ವಿರುದ್ಧ ಕೆಂಡಕಾರುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಪ್ರತಾಪವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೋರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಸೋಮವಾರ ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಆರ್ಭಟ ಚುನಾವಣೆಯಲ್ಲಿ ತಿಳಿಯಲಿದೆ. ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿತು ಎಂದು ಮನಸೋ ಇಚ್ಛೆ ಮಾತನಾಡಿದರೆ ನಡೆಯುತ್ತದೆ ಎಂದು ಅವರು ಭಾವಿಸಿದಂತಿದೆ ಎಂದು ಕಿಡಿಕಾರಿದರು.

ಅಡ್ವಾಣಿ ಶಿಷ್ಟಾಚಾರದ ಅರಿವಿಲ್ಲ: ಯಡಿಯೂರಪ್ಪನವರಿಗೆ ಶಿಷ್ಟಾಚಾರದ ಅರಿವಿಲ್ಲ. ಅರಿವಿದ್ದಿದ್ದರೆ ಹೀಗೆಲ್ಲ ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಬಿಜೆಪಿಯ ಪ್ರಶ್ನಾತೀತ ನಾಯಕ, ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಯವರ ವಿರುದ್ಧ ಯಡಿಯೂರಪ್ಪ ಮನ ಬಂದಂತೆ ಹೇಳಿಕೆ ನೀಡಿರುವುದು ನೋವಾಗಿದೆ.

ಯಡಿಯೂರಪ್ಪ ಸೇರಿದಂತೆ ಕೋಟ್ಯಂತರ ಕಾರ್ಯಕರ್ತರನ್ನು ಬೆಳೆಸಿದ ಹಿರಿಯ ಮುಖಂಡ ಅಡ್ವಾಣಿಯಗೆ ಧಿಕ್ಕಾರ ಎಂದು ಹೇಳಿರುವುದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವ ಪ್ರಾಮಾಣಿಕ ಕಾರ್ಯಕರ್ತರ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶಕ್ಕೆ ಬಿಜೆಪಿಯ ಯಾವ ಶಾಸಕರೂ ಹೋಗುವುದಿಲ್ಲ. ಎಲ್ಲ ಶಾಸಕರು ಪಕ್ಷ ಸಂಘಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ, ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬಿಎಸ್‌ವೈ ಅವರ ಹೆಸರು ಮತ್ತು ಫೋಟೋ ಹಾಕಿಸಿಲ್ಲ ಎಂದು ಗಲಾಟೆ ಮಾಡಿದ್ದು ಬೇಸರದ ಸಂಗತಿ ಎಂದರು.

ಮಾಜಿ ಸಚಿವ ಶ್ರೀರಾಮುಲು ಅವರನ್ನು ಬೆಂಬಲಿಸಿ ಮಾತನಾಡಿದ ಶಾಸಕರು, ಸಂಸದರ ಬಗ್ಗೆ ನಮಗೆ ಲೆಕ್ಕ ಇಲ್ಲ. ಆದರೆ ಬಿಜೆಪಿ ನಾಯಕರ ವಿರುದ್ಧ ನಿತ್ಯವೂ ಹರಿಹಾಯುತ್ತಿರುವ ಯಡಿಯೂರಪ್ಪ ಬೆಂಬಲಿಗ ಶಾಸಕರು, ಸಂಸದರ ವಿರುದ್ಧ ಶಿಸ್ತು ಕ್ರಮ ಜರಗಿಸುತ್ತೇವೆ ಎಂದು ಈಶ್ವರಪ್ಪ ಹೇಳಿದರು.

ಧನಂಜಯ್ ಕುಮಾರ್‌ಗೆ ಜಾಗ ತೋರಿಸಿದಂತೆ ಅವರ ಬೆಂಬಲಿಗ ಶಾಸಕರಿಗೂ ದಾರಿ ಮಾಡುತ್ತೇವೆ ಎಂದು ಗುಡುಗಿದ ಈಶ್ವರಪ್ಪ, ಪಕ್ಷದ ವಿರುದ್ಧ ಹಗುರವಾಗಿ ಮಾತನಾಡುತ್ತಾ ಬಿಎಸ್‌ವೈ ಅವರನ್ನು ಸಮರ್ಥನೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದರು.

English summary
BS Yeddyurappa should show his strength in assembly elections KS Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X