ಗಂಗಾ ತೀರದಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 20 ಜನರು ಬಲಿ

ವಿಪರೀತ ಜನಸಂದಣಿ ಇದ್ದದ್ದರಿಂದ ಬಾಂಬೂನಿಂದ ತಯಾರಿಸಿದ ಸೇತುವೆ ಕುಸಿದುಬಿದ್ದಿದೆ. ವಿದ್ಯುತ್ ತಂತಿಗಳು ಕಡಿತಗೊಂಡಿದ್ದರಿಂದ ಗಾಬರಿಗೊಂಡ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದಾರೆ. ಆಗ ಸಂಭವಿಸಿದ ಕಾಲ್ತುಳಿದಿಂದಾಗಿ ದುರಂತ ಸಂಭವಿಸಿದೆ.
ಸತ್ತವರಲ್ಲಿ ಹೆಂಗಸರು, ಹಿರಿಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಆದರೆ, ಇಂದು ರಜಾ ಘೋಷಿಸಲಾಗಿದ್ದರಿಂದ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಕಂಡುಬಂದಿತು.
ಅಸ್ತಂಗತನಾಗುತ್ತಿರುವ ಸೂರ್ಯನನ್ನು ಆರಾಧಿಸುವ 'ಛತ್' ಉತ್ಸವ ಬಿಹಾರದಲ್ಲಿ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದು. ದೀಪಾವಳಿ ಮುಗಿದ ಆರು ದಿನಗಳ ನಂತರ ಸಂಜೆಯ ಸಮಯದಲ್ಲಿ ನದಿತೀರಕ್ಕೆ ಹೋಗಿ ಸೂರ್ಯದೇವನಿಗೆ ಅರ್ಘ್ಯ ನೀಡುತ್ತಾರೆ. ಮರುದಿನ ಬೆಳಗಿನ ಜಾವ ಕೂಡ ಸೂರ್ಯನಿಗೆ ನಮನ ಸಲ್ಲಿಸುತ್ತಾರೆ. ಈ ಉತ್ಸವ ಶನಿವಾರವೇ ಆರಂಭವಾಗಿದೆ.
ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆಂದು ತಿಳಿದಿದ್ದರೂ ಜನರ ಸುರಕ್ಷತೆಗಾಗಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ. ಆಡಳಿತಾಧಿಕಾರಿಗಳು ಕೂಡಲೆ ಸಹಾಯಕ್ಕೆ ಧಾವಿಸಿದ್ದರೆ ಇಷ್ಟೊಂದು ಪ್ರಾಣಹಾನಿ ಆಗುತ್ತಿರಲಿಲ್ಲ. ಪೊಲೀಸರು ಕೂಡ ಕರೆ ಮಾಡಿದರೂ ನೆರವಿನ ಹಸ್ತ ಚಾಚಲಿಲ್ಲ. ಸಾರ್ವಜನಿಕರೇ ಸಹಾಯಕ್ಕೆ ಧಾವಿಸಬೇಕಾಯಿತು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications