ಬಾಳಾ ಠಾಕ್ರೆಯಂಥವರು ನಮ್ಮಲಿಲ್ಲ, ಯಾಕೆ?
ಭಾಷೆ, ಹಿಂದುತ್ವ, ಶಿವಸೇನೆ, ಪ್ರಾದೇಶಿಕ ಪಕ್ಷ ಮತ್ತು ತಮ್ಮ ರಾಜ್ಯದಲ್ಲಿ ನೆಲೆಸಿರುವ ಪರಕೀಯರ ಬಗೆಗಿನ ಅಸಹನೆಗಿಂತ ಮುಖ್ಯವಾಗಿ ಠಾಕ್ರೆಗೆ ಇದ್ದ ಆತಂಕ ಅಥವಾ ಕಾಳಜಿಯೆಂದರೆ ಮಹಾರಾಷ್ಟ್ರದ ಮೂಲ ನಿವಾಸಿಗಳ ಅನ್ನವನ್ನು, ಅಂದರೆ ಉದ್ಯೋಗವಕಾಶಗಳನ್ನು ಯಾರೋ ಕಸಿದುಕೊಳ್ಳುತ್ತಿದ್ದಾರೆಂಬ ಸಿಟ್ಟು. ಅದು ಅವರ ಉದ್ದದ್ದ ಮೂಗಿನ ಮೇಲೆ ಸದಾ ಕುಣಿಯುತ್ತಿತ್ತು.
ಮರಾಠಿಗರ ಅನ್ನ ಕಸಿದವರು ಮದ್ರಾಸಿಗಳು ಎನ್ನುವುದು ಆಗಿನ ಕಾಲಕ್ಕೆ ಅವರ ವಾದ. ಮದ್ರಾಸಿಗಳೆಂದರೆ ಅದರಲ್ಲಿ ಕನ್ನಡಿಗರೂ ಇದ್ದಾರಲ್ಲವೆ. ಮುಖ್ಯವಾಗಿ ಮಹಾರಾಷ್ಟದಲ್ಲಿ ಅದರಲ್ಲೂ ಪ್ರಮುಖವಾಗಿ ಅಮ್ಚಿ ಮುಂಬೈನಲ್ಲಿ ತಳ ಊರಿರುವ ಉಡುಪಿ ಹೋಟೆಲ್ ಜನಗಳ ಬಗ್ಗೆ ಅವರಿಗೆ ತಾತ್ಸಾರ. ಕನ್ನಡಿಗರ ಮೇಲಿನ ಕೋಪದ ಭರದಲ್ಲಿ ಅವರು ಒಮ್ಮೊಮ್ಮೆ ಕರ್ನಾಟಕವನ್ನು ಕಂಡರೆ ಪಾಕಿಸ್ತಾನವನ್ನೇ ಕಂಡಹಾಗೆ ಎಗರಾಡುತ್ತಿದ್ದನ್ನು ನಾವು ನೋಡಿದ್ದೇವೆ.
ದಕ್ಷಿಣ ಕನ್ನಡದ ಯಾವುದೋ ಒಂದು ಹಳ್ಳಿಯಿಂದ ಒಬ್ಬ ಹುಡುಗ ಮನೆಬಿಟ್ಟು ಓಡಿಹೋದರೆ ಅವನು ಮೊದಲ ನೋಟ ಮತ್ತು ಗುರಿ ಬಾಂಬೆ ಆಗಿರುತ್ತಿತ್ತು. ಫುಟ್ ಪಾತುಗಳಲ್ಲಿ ಮಲಗುತ್ತಾ ಬದುಕು ಆರಂಭಿಸಿ, ಹೋಟೆಲಿನಲ್ಲಿ ಪಾತ್ರೆ ತೊಳೆಯುತ್ತಾ ಕ್ರಮೇಣ ತಮ್ಮದೇ ಆದ ತಿಂಡಿ ಕೇಂದ್ರಗಳನ್ನು ತೆರೆದು ಬೆಳೆದ ಕನ್ನಡಿಗರ ಮೂರು ತಲೆಮಾರು ಮುಂಬೈನಲ್ಲಿದೆ. ಈ ಪರಂಪರೆಯನ್ನು ಕಂಡರೆ ಆಗುತ್ತಿರಲಿಲ್ಲ ಠಾಕ್ರೆಗೆ.
ಆ ಕೋಪವನ್ನು ಅವರು ಹೇಗೇಗೋ ತೀರಿಸಿಕೊಳ್ಳಲು ಪ್ರಯತ್ನಿಸಿದ್ದುಂಟು. ಭಾಷೆ, ಗಡಿಯ ವಿಷಯ ಕೆದಕಿ ಬೆಳಗಾವಿ ಪ್ರಾಂತ್ಯದಲ್ಲಿ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುವುದರ ಮೂಲಕ ಗುಟುರು ಹಾಕುತ್ತಿದ್ದರು. ಅವರ ಪ್ರಚೋದನೆಯಿಂದ ಪ್ರೇರೇಪಿತರಾಗಿ ಗಡಿನಾಡಲ್ಲಿ ತಂಟೆ ಮಾಡುವ ಜನ ಈಗ ಕಮ್ಮಿಯಾಗಿದ್ದಾರೆ. ಆದರೆ, ಅವರ ಸಂಖ್ಯೆ ನಿಸ್ಸಂತತಿ ಆಗಿಲ್ಲ ಎನ್ನುವುದನ್ನು ಕನ್ನಡಿಗರು ಗಮನದಲ್ಲಿಡಬೇಕು.
ಭಾರತದ ರಾಜಕೀಯ ನಕಾಶೆಯಲ್ಲಿ ಅನೇಕಾರು ಪ್ರಾದೇಶಿಕ ಪಕ್ಷಗಳು ಚಿಗುರೊಡೆದು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಅಷ್ಟೇ ಅಲ್ಲ. ತಮ್ಮ ಜನಪ್ರಿಯತೆ ಮತ್ತು ಅಧಿಕಾರಗಳು, ದಬಾವಣೆಗಳು ದೆಹಲಿಯಲ್ಲಿ ಸದ್ದು ಮಾಡಬೇಕೇಂದು ಅಪೇಕ್ಷೆ ಪಟ್ಟಿವೆ. ಅದರ ಫಲವೇ ಕೇಂದ್ರದಲ್ಲಿ ಸತತವಾಗಿ ಆಳುತ್ತಾ ಬಂದಿರುವ ಸಮ್ಮಿಶ್ರ ಸರಕಾರಗಳು.
ಠಾಕ್ರೆ ಕೂಡ ಪ್ರಾದೇಶಿಕ ಪಕ್ಷ ಕಟ್ಟಿದವರು. ಆದರೆ ನಿಲುವು ಮಾತ್ರ ಕೊಂಚ ಭಿನ್ನ. ತಮ್ಮ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗವಕಾಶಗಳು ಮರಾಠಿಗರ ಸೊತ್ತಾಗೇ ಉಳಿಯಬೇಕೆನ್ನುವುದು ಅವರ ದಣಿವರಿಯದ ದಾಹ. ಹೌದು, ಲೋಕಸಭೆಗೆ ಶಿವಸೇನೆಯ ಅಭ್ಯರ್ಥಿಗಳು ಆಯ್ಕೆಯಾಗಿ ಹೋದರೂ, ದೆಹಲಿಯಲ್ಲಿ ತಮ್ಮ ಪ್ರಾದೇಶಿಕ ಪಕ್ಷ ಬಾವುಟ ಹಾರಿಸಬೇಕೆಂಬ ಛಲ ಠಾಕ್ರೆಗೆ ಇರಲಿಲ್ಲ. ಅವರಿಗೆ ಅದು ಬೇಕೂ ಇರಲಿಲ್ಲ.
ಹಾಗೆ ನೋಡಿದರೆ, ಠಾಕ್ರೆ ದೆಹಲಿ ವಿಮಾನ ಹತ್ತಿದ್ದೇ ಅಪರೂಪ. ಸಫ್ದರ್ ಜಂಗ್ ರಸ್ತೆಯಾಗಲೀ, ರಾಮಲೀಲಾ ಮೈದಾನದ ಕಡೆಯಾಗಲಿ ಅವರು ಮುಖ ಮಾಡಿಯೂ ಮಲಗುತ್ತಿರಲಿಲ್ಲ. ಮರಾಠಿಗರ ಏಳಿಗೆಯೇ ಅವರಿಗೆ ಮಹಾನವಮಿ. ರಾಜ್ಯದ ಸ್ವಂತಿಕೆ ಉಳಿಸಿಕೊಳ್ಳುವ ಭರದಲ್ಲಿ ಠಾಕ್ರೆ ಕೈಹಾಕದ ಕ್ಷೇತ್ರವೇ ಇಲ್ಲ, ಮಾಡದ ಹಾವಳಿಯೇ ಇಲ್ಲ ಎಂದರೆ ತಪ್ಪಲ್ಲ. ಉತ್ತರ ಭಾರತದವರು ಮುಂಬೈನಲ್ಲಿ ಇರಕೂಡದು ಎಂಬ ಮೊಂಡು ವಾದದ ಸ್ಟೇಟ್ಸ್ ಮನ್ ಇವರೇ!
ಠಾಕ್ರೆಯಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖ ಸಂಗತಿ ಪಾಕಿಸ್ತಾನದ ಮೇಲೆ ಅವರಿಗಿದ್ದ ಅಪಾರ ಕೋಪ. ಅವರೇನಾದರೂ ಈ ದೇಶದ ಪ್ರಧಾನಿಯಾಗಿದ್ದರೆ ಪ್ರತಿನಿತ್ಯ ಪಾಕ್ ವಿರುದ್ಧ ಯುದ್ಧ ಸಾರುತ್ತಿದ್ದರು. ಅಂತೂ, ಹಲವು ದಿಕ್ಕಿನಲ್ಲಿ, ಹಲವು ಬಗೆಯಲ್ಲಿ ಹೋರಾಡುತ್ತಲೇ ಬದುಕು ಸವೆಸಿದ ಠಾಕ್ರೆಯವರು ಶಿವಸೇನೆ ಅಲ್ಲ, ಸಮಸ್ತ ಮರಾಠಿ - ಮಹಾರಾಷ್ಟ್ರವನ್ನು ಕಾಯುವ ಹುಲಿಯಂತೆ ಇದ್ದದ್ದು ಇತಿಹಾಸ.
ಅಂತೂ ಮರಾಠಿ ನೆಲದ ಒಂದು ಹಿರಿಯ ಹುಲಿ - ತಲೆ ಧರಾಶಾಯಿ ಆಯಿತು. ವಿರೋಧಿಗಳ ಪಾಲಿಗೆ ಹುಲಿಯಾಗಿ, ಮೂಲ ನಿವಾಸಿಗಳ ಪಾಲಿಗೆ ಪುಣ್ಯಕೋಟಿಯಾಗಿ ಬದುಕಿದ ವ್ಯಾಘ್ರವೊಂದು ಶಿವಾಜಿ ಉದ್ಯಾನವನದ ನೆರಳಲ್ಲಿ ಮಲಗಿತು. ಬೇಸರದ ಸಂಗತಿಯೆಂದರೆ ನಾಡು ನುಡಿಗಾಗಿ, ಸ್ಥಳೀಯರ ಹಿತಾಸಕ್ತಿಗಾಗಿ ಹೋರಾಡುವ ಛಲವಾದಿ ಗುಣಗಳನ್ನು ಮೈಗೂಡಿಸಿಕೊಂಡ ಇಂಥದೊಂದು ಹುಲಿ ಕನ್ನಡದಲ್ಲಿ ಹುಟ್ಟಲಿಲ್ಲ. ನಮ್ಮಲ್ಲಿರುವುವರೆಲ್ಲ ಪುಣ್ಯಕೋಟಿಗಳೇ!
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ













Click it and Unblock the Notifications